ಸಂಸತ್ತಿನ ಚಳಿಗಾಲದ ಅಧಿವೇಶನ: ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆಯನ್ನು ಇಂದು (ಭಾನುವಾರ) ಕರೆಯಲಾಗಿದೆ.
17ನೇ ಲೋಕಸಭೆಯ ಏಳನೇ ಅಧಿವೇಶನವು ನ.29ರಿಂದ ಪ್ರಾರಂಭವಾಗಲಿದ್ದು, ಡಿ.23ಕ್ಕೆ ಮುಕ್ತಾಯವಾಗಲಿದೆ.
ಈ ಅಧಿವೇಶನವು ರಾಜಕೀಯವಾಗಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಕೃಷಿ ಕಾನೂನು ರದ್ದತಿ, ಕೋವಿಡ್ ಲಸಿಕೆ ಭದ್ರತೆ, ತನಿಖಾ ಸಂಸ್ಥೆಗಳ ಮುಖ್ಯಸ್ಥರ ಅಧಿಕಾರ ಅವಧಿ ವಿಸ್ತರಣೆ, ಹಣದುಬ್ಬರ, ಇಂಧನ ಬೆಲೆ ಏರಿಕೆ ಮತ್ತು ಕಾಶ್ಮೀರದಲ್ಲಿ ನಾಗರಿಕರ ಮೇಲೆ ಉಗ್ರರ ದಾಳಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಅಧಿವೇಶನದಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.
ಪ್ರತಿಪಕ್ಷಗಳ ನಾಯಕರ ಸಭೆ
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧದ ಹೋರಾಟದ ಕಾರ್ಯತಂತ್ರವನ್ನು ರೂಪಿಸಲು ವಿರೋಧ ಪಕ್ಷಗಳ ನಾಯಕರು ಸೋಮವಾರ (ನ.29) ಬೆಳಿಗ್ಗೆ ಸಭೆ ಸೇರಲಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಂಬಂಧ ಸಂಸತ್ತಿನ ಉಭಯ ಸದನಗಳ ಪ್ರತಿಪಕ್ಷಗಳ ಸದನದ ನಾಯಕರಿಗೆ ಪತ್ರ ಬರೆದಿದ್ದಾರೆ.