ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟದ ವಾಹನಗಳ ಮಾಲೀಕರಿಗೆ ಶಾಕ್: ಎಫ್‌ಸಿಗೆ ಪೊಲೀಸ್ ಇಲಾಖೆ NOC ಕಡ್ಡಾಯ
ಬೆಂಗಳೂರು: ಯೆಲ್ಲೋ ಬೋರ್ಡ್ ವಾಹನ ಎಫ್‌ಸಿಗೆ ಪೊಲೀಸ್ ಇಲಾಖೆಯ ಎನ್‌ಒಸಿ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಸಂಚಾರ ನಿಯಮ ಉಲ್ಲಂಘಿಸಿ ದಂಡಕಟ್ಟದ ವಾಹನಗಳಿಗೆ ಮೂಗುದಾರ ಹಾಕಲು ಚಿಂತನೆ ನಡೆದಿದ್ದು, ಕಾನೂನು ತಿದ್ದುಪಡಿಗೆ ಸಾರಿಗೆ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪೊಲೀಸ್ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.
ವಾಹನಗಳಿಗೆ ಎಫ್.ಸಿ. ಮಾಡಿಸುವ ಸಂದರ್ಭದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಮತ್ತು ವಸೂಲಿ ಮಾಡಲು ಪೊಲೀಸ ಇಲಾಖೆ ಚಿಂತನೆ ನಡೆಸಿದೆ. ಯೆಲ್ಲೋ ಬೋರ್ಡ್ ವಾಹನಗಳ ವಾರ್ಷಿಕ ಸದೃಢ ಪ್ರಮಾಣ ಪತ್ರ ಪಡೆಯುವ ಸಂದರ್ಭದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಬಾಕಿ ದಂಡ ಪಾವತಿಸಿರುವ ನಿರಾಕ್ಷೇಪಣಾ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು ಎನ್ನುವ ಕಾನೂನು ಜಾರಿಗೊಳಿಸಲು ಕೋರಲಾಗಿದೆ.
ಎಂಟು ವರ್ಷದೊಳಗಿನ ವಾಹನಗಳಿಗೆ ಎರಡು ವರ್ಷಕ್ಕೊಮ್ಮೆ, ಎಂಟು ವರ್ಷ ಮೇಲ್ಪಟ್ಟ ವಾಹನಗಳಿಗೆ ಪ್ರತಿ ವರ್ಷ ಎನ್‌ಒಸಿ ಮಾಡಿಸಬೇಕಿದೆ. ಈ ಸಂದರ್ಭದಲ್ಲಿ ಮಾಲಿನ್ಯ ಪ್ರಮಾಣ ಪತ್ರ, ತೆರಿಗೆ ಪತ್ರ, ವಾಹನ ನೋಂದಣಿ ದಾಖಲಾತಿ ನೀಡಬೇಕು. ಈಗ ಪೊಲೀಸ್ ಇಲಾಖೆಯಿಂದಲೂ ಎನ್‌ಒಸಿ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಇದಕ್ಕೆ ವಾಣಿಜ್ಯ ವಾಹನ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ದಿನನಿತ್ಯದ ದುಡಿಮೆ ನಂಬಿಕೊಂಡು ಜೀವನ ನಡೆಸುತ್ತಿರುವ ವಾಹನಗಳ ಚಾಲಕರಿಗೆ ಈ ನಿಯಮದಿಂದ ದೊಡ್ಡ ಪೆಟ್ಟು ಬೀಳುತ್ತದೆ ಎಂದು ವಿರೋಧ ವ್ಯಕ್ತವಾಗಿದೆ.