ವಿಕಲಚೇತನ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್ , ಬ್ರೈಲ್ ಕಿಟ್ ನೀಡಲು ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲಾ/ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂಧ ವಿಕಲಚೇತನ ವಿದ್ಯಾರ್ಥಿ/ನಿಗಳು ಇತ್ತೀಚಿನ ತಂತ್ರಜ್ಞಾನ ಮತ್ತು ತಂತ್ರಾಂಶದ ಉಪಯೋಗದಿಂದ ಉನ್ನತ ಶಿಕ್ಷಣವನ್ನು ಹೊಂದಲು ಅನುಕೂಲವಾಗುವಂತೆ ಉಚಿತವಾಗಿ ಟಾಕಿಂಗ್ ಲ್ಯಾಪ್ಟಾಪ್ ಮತ್ತು ಬ್ರೈಲ್ ಕಿಟ್ ನೀಡಲು ಅರ್ಜಿ ಆಹ್ವಾನಿಸಿದೆ.
ಅರ್ಜಿ ನಮೂನೆಯನ್ನು ತಮ್ಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯೂ. ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯೂ. ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಪಡೆದು 2023ರ ಫೆಬ್ರವರಿ 10 ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸುವುದು..
ಷರತ್ತುಗಳು: ಅಂಧ ವ್ಯಕ್ತಿಗಳು ಭಾರತದ ಪ್ರಜೆಯಾಗಿರಬೇಕು ಮತ್ತು ಕರ್ನಾಟಕದಲ್ಲಿ ಕನಿಷ್ಟ 10 ವರ್ಷಗಳು ವಾಸವಾಗಿರುವ ಬಗ್ಗೆ ತಹಸೀಲ್ದಾರರಿಂದ ವಾಸಸ್ಥಳ ದೃಢೀಕರಣ ಪತ್ರ ಪಡೆದು ಪ್ರತಿ ಸಲ್ಲಿಸುವುದು. ಎಸ್.ಎಸ್.ಎಲ್.ಸಿ ಹಾಗೂ ನಂತರದ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್ಟಾಪ್ ನೀಡಲಾಗುವುದು. ಲ್ಯಾಪ್ಟಾಪ್ ಪಡೆಯುವ ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಕಾಲೇಜು/ಸಂಸ್ಥೆಯ ಮಖ್ಯಸ್ಥರಿಂದ ದೃಢೀಕರಣ ಶಿಫಾರಸ್ಸುನೊಂದಿಗೆ ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸುವುದು.
ಜಿಲ್ಲಾ ಮಟ್ಟದಲ್ಲಿ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಅಂಧರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆ ಒಬ್ಬ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿಯಲ್ಲಿ ಪಲಾನುಭವಿಯನ್ನು ಆಯ್ಕೆ ಮಾಡುವುದು.
ಈ ಯೋಜನೆಯ ಸೌಲಭ್ಯ ಪಡೆಯಲು ಯಾವುದೇ ಆದಾಯ ಮಿತಿ ಇರುವುದಿಲ್ಲ.ಸರ್ಕಾರ ನೀಡುವ ಲ್ಯಾಪ್ಟಾಪ್ ಅನ್ನು ಯಾವುದೇ ಕಾರಣಕ್ಕೆ ಪರಭಾರೆ ಮಾಡಬಾರದು. ಮಾಡಿದ್ದು ಕಂಡು ಬಂದಲ್ಲಿ ಅಂತವರ ಮೇಲೆ ಕ್ರಮ ಜರುಗಿಸಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
ಲ್ಯಾಪ್ ಟಾಪ್ ಅನ್ನು ಪಡೆಯುವ ವಿದ್ಯಾರ್ಥಿಯು ರೂ.100/- ಗಳ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಬರೆದು ಕೊಡುವುದು ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸುವುದು.
ಈ ಸೌಲಭ್ಯವನ್ನು ಪಡೆಯುವ ವಿಕಲಚೇತನ ವಿದ್ಯಾರ್ಥಿಗಳು ಶೇಕಡ 40% ಕ್ಕಿಂತ ಹೆಚ್ಚು ದೃಷ್ಟಿ ದೋಷವುಳ್ಳವರಾಗಿರಬೇಕು. ಅರ್ಜಿ ಸಲ್ಲಿಸುವ ವಿಕಲಚೇತನ ವಿದ್ಯಾರ್ಥಿಗಳು ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯು.ಡಿ.ಐ.ಡಿ) ಕಾರ್ಡ್ ಪ್ರತಿ ಕಡ್ಡಾಯವಾಗಿ ಸಲ್ಲಿಸುವುದು.ಲ್ಯಾಪ್ಟಾಪ್ ಅನ್ನು ವಿದ್ಯಾರ್ಥಿಗಳು ಶಿಕ್ಷಣದ ಸಲುವಾಗಿಯೇ ಉಪಯೋಗಿಸತಕ್ಕದ್ದು. ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಅಧಿಕಾರವು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳದ್ದಾಗಿರುತ್ತದೆ.
ಲ್ಯಾಪ್ಟಾಪ್ ಅನ್ನು ಒಂದು ವಿದ್ಯಾರ್ಥಿಗೆ ಜೀವಿತ ಕಾಲದಲ್ಲಿ ಒಂದು ಬಾರಿ ಮಾತ್ರ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಬೇರೆ ಇಲಾಖೆಗಳು ಅಥವಾ ಸಂಘ ಸಂಸ್ಥೆಗಳಿಂದ ಲ್ಯಾಪ್ಟಾಪ್ ಅನ್ನು ಪಡೆದಿದ್ದಲ್ಲಿ ಅಂತಹವರು ಅರ್ಹರಾಗಿರುವುದಿಲ್ಲ.ಲ್ಯಾಪ್ ಟಾಪ್ ಅನ್ನು ಸ್ವೀಕರಿಸಿರುವ ಅರ್ಜಿಗಳ ಜೇಷ್ಠತೆ ಅನುಸಾರ ವಿತರಿಸಲಾಗುವುದು.ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಯನ್ನು ವಿಕಲಚೇತನರ ಸಹಾಯವಾಣಿ: 080-29787441 ಅಥವಾ ಕಛೇರಿ ವಿಳಾಸ: ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ ಜಿಲ್ಲಾಡಳಿತ ಭವನ, ನಂ.03 ನೆಲಮಹಡಿ ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಎನ್.ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.