ರೈತರಿಗೆ ಗುಡ್ ನ್ಯೂಸ್ : 2 ಲಕ್ಷ ಕೃಷಿ ಪತ್ತಿನ 'ಸಹಕಾರ ಸಂಘ' ಸ್ಥಾಪನೆಗೆ ಕೇಂದ್ರ ಸರ್ಕಾರ ಅಸ್ತು

ನವದೆಹಲಿ: ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ, ದೇಶಾದ್ಯಂತ 2 ಲಕ್ಷ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ, ಹೈನುಗಾರಿಕೆ ಮತ್ತು ಮೀನು ಗಾರಿಕೆ ಸಹಕಾರ ಸಂಘವನ್ನು ಸ್ಥಾಪಿಸಲು ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.ಮುಂದಿನ 5 ವರ್ಷದಲ್ಲಿ ಈ ಕೃಷಿ ಕ್ರೆಡಿಟ್ ಸೊಸೈಟಿಗಳು ಸ್ಥಾಪನೆ ಆಗಲಿವೆ.ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲೂ ಕನಿಷ್ಠ ಒಂದು ಕ್ರೆಡಿಟ್ ಸೊಸೈಟಿ, ಮುಂದಿನ 5 ವರ್ಷಗಳಲ್ಲಿ ಈ ಸೊಸೈಟಿಗಳ ನಿರ್ಮಾಣವಾಗಲಿದೆ.
ಮೋದಿ ಕ್ಯಾಬಿನೆಟ್ ಬುಧವಾರ (ಫೆಬ್ರವರಿ 15) ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಕ್ಯಾಬಿನೆಟ್ ಸಭೆಯ ನಂತರ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಸರ್ಕಾರವು ಸಹಕಾರಿ ಸಂಘಗಳನ್ನ ಬಲಪಡಿಸುತ್ತದೆ ಎಂದು ಹೇಳಿದರು. ವಿವಿಧ ಉದ್ದೇಶಗಳಿಗಾಗಿ ಮುಂದಿನ ಐದು ವರ್ಷಗಳಲ್ಲಿ ಎರಡು ಲಕ್ಷ ಪ್ರಾಥಮಿಕ ಕೃಷಿ ಸಹಕಾರ ಕ್ರೆಡಿಟ್ ಸೊಸೈಟಿಗಳು (ಪಿಎಸಿ) / ಹೈನುಗಾರಿಕೆ / ಮೀನುಗಾರಿಕೆ ಸಹಕಾರ ಸಂಘಗಳನ್ನು ಸ್ಥಾಪಿಸುವ ಗುರಿಯನ್ನ ನಿಗದಿಪಡಿಸಲಾಗಿದೆ ಎಂದರು.
ವೈಬ್ರೆಂಟ್ ಗ್ರಾಮ ಕಾರ್ಯಕ್ರಮ
ದೇಶದ ಗಡಿಗಳನ್ನ ಬಲಪಡಿಸಲು ವೈಬ್ರೆಂಟ್ ವಿಲೇಜ್ ಕಾರ್ಯಕ್ರಮವನ್ನ ಮೋದಿ ಸರ್ಕಾರ ಅನುಮೋದಿಸಿದೆ ಎಂದು ಅವರು ಹೇಳಿದರು. ಇದರ ಅಡಿಯಲ್ಲಿ, ದೇಶದ ಉತ್ತರದ ಗಡಿಯಲ್ಲಿರುವ ಹಳ್ಳಿಗಳಲ್ಲಿ ಮೂಲಸೌಕರ್ಯಗಳನ್ನ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ 4800 ಕೋಟಿ ರೂಪಾಯಿ ಮೀಸಲಿಡಲಾಗಿದೆ.ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ಒಟ್ಟು 19 ಜಿಲ್ಲೆಗಳ 2966 ಗ್ರಾಮಗಳಲ್ಲಿ ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಬಲಪಡಿಸಲಾಗುವುದು ಎಂದು ಠಾಕೂರ್ ಹೇಳಿದರು. ಇದು ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮಕ್ಕಿಂತ ಭಿನ್ನವಾಗಿರುತ್ತದೆ. ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಕೇಂದ್ರ ಸಚಿವರು ಹೇಳಿದರು.