ಯೋಗದಲ್ಲಿ ಕರ್ನಾಟಕ ಗಿನ್ನೆಸ್ ದಾಖಲೆ ಸೃಷ್ಟಿ : ಸಚಿವ ಡಾ.ನಾರಾಯಣಗೌಡ ಸಂತಸ
ಬೆಂಗಳೂರು: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ಯೋಗಥಾನ್ ವಿಶ್ವದಾಖಲೆ ಸೃಷ್ಟಿಸಿದ್ದಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇಂದು ರಾಜ್ಯಾದ್ಯಂತ 6 ಲಕ್ಷಕ್ಕೂ ಅಧಿಕ ಜನರು ಏಕಕಾಲಕ್ಕೆ ಯೋಗಾಭ್ಯಾಸ ಮಾಡುವ ಮೂಲಕ ವಿಶ್ವದಾಖಲೆ ಬರೆಯಲಾಗಿದೆ. ಈ ಮೂಲಕ ರಾಜಸ್ಥಾನದಲ್ಲಿ 1.60 ಲಕ್ಷ ಜನರ ಮೂಲಕ ಸೃಷ್ಟಿಯಾಗಿದ್ದ ದಾಖಲೆಯನ್ನು ಕರ್ನಾಟಕ ಅಳಿಸಿ ಹಾಕಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.
ಇಂದು ಬೆಳಗ್ಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಯೋಗಥಾನ್ ಉದ್ಘಾಟಿಸಿದರು.
ಗಿನ್ನೆಸ್ ದಾಖಲೆ ಸೃಷ್ಟಿ ಮಾಡುವ ಹಿನ್ನೆಲೆಯಲ್ಲಿ ಏಕಕಾಲದಲ್ಲಿ ಐದು ಲಕ್ಷ ಜನರು ಸೇರಿ ಯೋಗ ಮಾಡುವ ಗುರಿ ಹೊಂದಲಾಗಿತ್ತು. ಸರ್ಕಾರದ ಈ ಪ್ರಯತ್ನ ವ್ಯಾಪಕ ಬೆಂಬಲ ಸಿಕ್ಕಿದ್ದು, ಆರೂವರೆ ಲಕ್ಷಕ್ಕೂ ಹೆಚ್ಚು ಜನರು ಇಂದಿನ ಯೋಗಥಾನ್ನಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮ ಯಶಸ್ವಿಗೊಳಿಸಿದ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಸ್ವಯಂ ಸೇವಕರು, ಸರ್ಕಾರಿ ನೌಕರರು, ಅಧಿಕಾರಿಗಳು, ಯೋಗಪಟುಗಳು ಸೇರಿದಂತೆ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.