"ಯಾವತ್ತೂ ತಂದೆಗೆ ಹೇಳಿಕೊಡ್ಬೇಡ ಮಕ್ಳುನ.." ಧ್ರುವ ಸರ್ಜಾ 'ಮಾರ್ಟಿನ್' ಡೈಲಾಗ್ ಸಿಕ್ಕಾಪಟ್ಟೆ ವೈರಲ್!

"ಯಾವತ್ತೂ ತಂದೆಗೆ ಹೇಳಿಕೊಡ್ಬೇಡ ಮಕ್ಳುನ.." ಧ್ರುವ ಸರ್ಜಾ 'ಮಾರ್ಟಿನ್' ಡೈಲಾಗ್ ಸಿಕ್ಕಾಪಟ್ಟೆ ವೈರಲ್!

2012ರಲ್ಲಿ ತೆರೆಕಂಡಿದ್ದ ಎಪಿ ಅರ್ಜುನ್ ನಿರ್ದೇಶನದ ಅದ್ದೂರಿ ಸಿನಿಮಾ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಟ ಧ್ರುವ ಸರ್ಜಾ ಮೊದಲ ಚಿತ್ರದಲ್ಲಿಯೇ ದೊಡ್ಡ ಹಿಟ್ ಬಾರಿಸಿ ಖ್ಯಾತಿ ಪಡೆದುಕೊಂಡರು. ಈ ಚಿತ್ರದಲ್ಲಿ ಧ್ರುವ ಸರ್ಜಾ ಹಾಗೂ ರಾಧಿಕಾ ಪಂಡಿತ್ ಕಾಂಬಿನೇಶನ್ ದೊಡ್ಡಮಟ್ಟದಲ್ಲಿ ಕ್ಲಿಕ್ ಆಗಿ ಅಚ್ಚು ರಚ್ಚು ಲವ್ ಸ್ಟೋರಿಗೆ ಕನ್ನಡ ಸಿನಿ ರಸಿಕರು ಫಿದಾ ಆಗಿಬಿಟ್ಟಿದ್ದರು.

ಈ ಹಿಟ್ ಬೆನ್ನಲ್ಲೇ ಧ್ರುವ ಸರ್ಜಾ ಹಾಗೂ ರಾಧಿಕಾ ಪಂಡಿತ್ ಜೋಡಿ ಬಹದ್ದೂರ್ ಎಂಬ ಸಿನಿಮಾದಲ್ಲಿ ಸಹ ಒಟ್ಟಿಗೆ ಕಾಣಿಸಿಕೊಂಡಿತು. ಈ ಚಿತ್ರದ ಮೂಲಕ ಸಹ ಧ್ರುವ ಸರ್ಜಾ ಗೆಲುವು ಕಂಡರು.

ಬಹದ್ದೂರ್ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಚೇತನ್ ಕುಮಾರ್ ಈ ಗೆಲುವಿನ ಬಳಿ ಧ್ರುವ ಸರ್ಜಾಗೆ ಭರ್ಜರಿ ಎಂಬ ಮತ್ತೊಂದು ಚಿತ್ರವನ್ನು ನಿರ್ದೇಶಿಸಿದರು ಹಾಗೂ ಈ ಚಿತ್ರವೂ ಸಹ ಗೆಲುವನ್ನು ಕಂಡಿತು. ಈ ಮೂಲಕ ಧ್ರುವ ಸರ್ಜಾ ನಟನೆಯ ಮೊದಲ ಮೂರು ಚಿತ್ರಗಳು ಸಾಲು ಸಾಲಾಗಿ ಹಿಟ್ ಆಗಿ ಆಕ್ಷನ್ ಪ್ರಿನ್ಸ್‌ಗೆ ಹ್ಯಾಟ್ರಿಕ್ ಗೆಲುವು ಸಿಕ್ಕಿತ್ತು.

ಹೀಗೆ ಹ್ಯಾಟ್ರಿಕ್ ಬಾರಿಸಿದ ಬಳಿಕ ಪೊಗರು ಚಿತ್ರದಲ್ಲಿ ನಟಿಸಿದ ಧ್ರುವ ಸರ್ಜಾಗೆ ನಿರೀಕ್ಷಿಸಿದ್ದ ಗೆಲುವು ಸಿಗಲಿಲ್ಲ. ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಬಳಿಕ ಇದೀಗ ಧ್ರುವ ಮತ್ತೆ ತಮ್ಮ ಮೊದಲ ನಿರ್ದೇಶಕ ಎಪಿ ಅರ್ಜುನ್ ಜತೆ ಮಾರ್ಟಿನ್ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ.

ಈ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆದಿದ್ದು, ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಇನ್ನು ಮಾರ್ಟಿನ್ ಚಿತ್ರದ ಮೇಲೆ ನಿರೀಕ್ಷೆ ಜತೆಗೆ ಧ್ರುವ ಸರ್ಜಾ ಈ ಚಿತ್ರದಲ್ಲಿ ಹಳೆಯ ಚಿತ್ರಗಳಲ್ಲಿ ಇದ್ದಂತೆ ಇರದೇ ತುಸು ಬದಲಾವಣೆ ಮಾಡಿಕೊಳ್ಳಲಿ ಎಂಬ ಆಪೇಕ್ಷೆ ಸಹ ಸಿನಿ ರಸಿಕರ ಪಾಲಿನಲ್ಲಿದೆ. ಹೌದು,

ಧ್ರುವ ಸರ್ಜಾ ಅವರ ಹಿಂದಿನ ಚಿತ್ರಗಳಲ್ಲಿ ಅತಿಯಾದ ಡೈಲಾಗ್ ಇದ್ದವು, ಹಾಗೆಂದ ಮಾತ್ರಕ್ಕೆ ಇವು ಚಿತ್ರಕ್ಕೆ ಮೈನಸ್ ಪಾಯಿಂಟ್ ಆಗಿರಲಿಲ್ಲ, ಅದ್ದೂರಿ ಚಿತ್ರ ದೊಡ್ಡಮಟ್ಟದಲ್ಲಿ ಗೆಲ್ಲಲು ಈ ಡೈಲಾಗುಗಳೂ ಸಹ ಒಂದು ರೀತಿಯ ಕಾರಣವೇ. ಆದರೆ ಅತಿಯಾದರೆ ಅಮೃತವೂ ಸಹ ವಿಷ ಅಂತಾರಲ್ಲ ಹಾಗೆ ಒಂದೆರಡು ಚಿತ್ರಗಳಲ್ಲಾದರೆ ಓಕೆ,

ಎಲ್ಲಾ ಚಿತ್ರಗಳಲ್ಲೂ ಅದೇ ಬೇಡ ಎನ್ನುವುದು ಕೆಲ ಸಿನಿ ರಸಿಕರ ಅಭಿಪ್ರಾಯ. ಹೀಗಾಗಿ ಸಿನಿ ರಸಿಕರಲ್ಲಿ ಮುಂಬರುವ ಮಾರ್ಟಿನ್ ಚಿತ್ರದ ಮೇಲೆ ಸಿನಿ ರಸಿಕರು ಕಣ್ಣಿಟ್ಟಿದ್ದು, ಈ ಚಿತ್ರದಲ್ಲಿ ಧ್ರುವ ಸರ್ಜಾ ಕಡಿಮೆ ಡೈಲಾಗ್ ಹೊಡೆದು ವಿಭಿನ್ನವಾಗಿ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇದೆ ಹಾಗೂ ಚಿತ್ರದ ಪೋಸ್ಟರ್‌ಗಳು ಈ ನಿರೀಕ್ಷೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿವೆ.

ಹೀಗಿರುವಾದ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮಾರ್ಟಿನ್ ಚಿತ್ರದ ಒಂದು ಡೈಲಾಗ್ ಹರಿದಾಡುತ್ತಿದ್ದು, ಈ ಡೈಲಾಗ್ ಕುರಿತಾಗಿ ಭಿನ್ನ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.


ಯಾವುದದು ಮಾರ್ಟಿನ್ ಡೈಲಾಗ್?

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾರ್ಟಿನ್ ಡೈಲಾಗ್ ಹೊಸದೇನಲ್ಲ. ಕಳೆದ ವರ್ಷ ನಡೆದ ಮೈಸೂರು ದಸರಾ ಕಾರ್ಯಕ್ರಮದಲ್ಲಿ ನಡೆದ ಯುವ ದಸರಾ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ತೆರಳಿದ್ದಾಗ ವೇದಿಕೆ ಮೇಲೆ ಹೇಳಿದ್ದ ಎಕ್ಸ್‌ಕ್ಲೂಸಿವ್ ಡೈಲಾಗ್ ಅದು.

ಹೌದು, ವೇದಿಕೆ ಏರಿ ಮಾರ್ಟಿನ್ ಕುರಿತು ಮಾತನಾಡಿದ್ದ ಧ್ರುವ ಸರ್ಜಾ ಎಲ್ಲೂ ಹೇಳದ ಚಿತ್ರದ ಎಕ್ಸ್‌ಕ್ಲೂಸಿವ್ ಡೈಲಾಗ್ ಹೇಳುತ್ತೇನೆ ಕೇಳಿ ಎಂದು "ಯಾವತ್ತೂ ತಂದೆಗೆ ಹೇಳ್ಕೊಡ್ಬೇಡ ಮಕ್ಳುನ ಹೆಂಗ್ ಹುಟ್ಟುಸೋದಂತ.. ಅರ್ಥ ಆಗ್ಲಿಲ್ವಾ? ಡೋಂಟ್ ಟೀಚ್ ಯುವರ್ ಫಾದರ್ ಹವ್ ಟು ಮೇಕ್ ಬೇಬಿಸ್" ಖಡಕ್ಕಾಗಿ ಹೇಳಿದ್ದರು. ಅಂದು ಹೇಳಿದ್ದ ಈ ಡೈಲಾಗ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಒಳಗಾಗಿದೆ.

ಡೈಲಾಗ್‌ಗೆ ಮಿಶ್ರ ಪ್ರತಿಕ್ರಿಯೆ

ಹೀಗೆ ಧ್ರುವ ಸರ್ಜಾ ಹೇಳಿದ ಡೈಲಾಗ್ ಕೇಳಿ ಕೆಲ ಸಿನಿ ರಸಿಕರು ಸಖತ್, ಖಡಕ್, ಬೆಂಕಿ ಎಂದು ಕಾಮೆಂಟ್ ಮಾಡುತ್ತಿದ್ದರೆ, ಇನ್ನೂ ಕೆಲವರು ಮತ್ತದೇ ಹಳೆ ಶೈಲಿಯಲ್ಲ ಡೈಲಾಗ್ ಏಕೆ, ಸಾಮಾನ್ಯ ಸಂಭಾಷಣೆಯಲ್ಲಿಯೇ ಒಂದೊಳ್ಳೆ ಚಿತ್ರ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ಡೈಲಾಗ್‌ನ ವಿಡಿಯೊ ತುಣುಕು ಎಲ್ಲೆಡೆ ಹರಿದಾಡುತ್ತಿದ್ದು ಟ್ರೋಲ್‌ಗೂ ಸಹ ಒಳಗಾಗಿದೆ.

ಎಪಿ ಅರ್ಜುನ್ ಮೇಲೆ ಭರವಸೆ!

ಎಷ್ಟೇ ಓವರ್ ಎನಿಸುವ ಡೈಲಾಗ್ ಇದ್ದರೂ ಸಹ ಈ ಚಿತ್ರದ ಮೇಲೆ ನಿರೀಕ್ಷೆ ಇರುವುದಕ್ಕೆ ಧ್ರುವ ಸರ್ಜಾ ಮಾತ್ರವಲ್ಲದೇ ಎಪಿ ಅರ್ಜುನ್ ಸಹ ಕಾರಣರಾಗಿದ್ದಾರೆ. ಏಕೆಂದರೆ ಈ ಹಿಂದೆ ಇದೇ ಧ್ರುವ ಸರ್ಜಾಗೆ ಇದೇ ರೀತಿಯ ಡೈಲಾಗ್‌ಗಳನ್ನು ಇಟ್ಟುಕೊಂಡು ಅದ್ದೂರಿ ಎಂಬ ಚಿತ್ರವನ್ನು ನಿರ್ದೇಶಿಸಿ ಗೆಲ್ಲಿಸಿ ಇಂಡಸ್ಟ್ರಿಗೆ ಕರೆತಂದಿದ್ದರು. ಹೀಗೆ ದೊಡ್ಡಮಟ್ಟದ ಹಿಟ್ ಕೊಟ್ಟಿದ್ದ ಈ ಜೋಡಿಯ ಸಿನಿಮಾವೆಂಬ ಕಾರಣಕ್ಕೆ ಈ ಚಿತ್ರದ ಮೇಲೆ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ..