ಮಾದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್‌

ಮಾದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್‌

ನೂರು : ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಶ್ರೀರಂಗಪಟ್ಟಣ ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಸೋಮವಾರ ಮಧ್ಯಾಹ್ನ 12 ಗಂಟೆಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ ನಟ ದರ್ಶನ್ ಅವರನ್ನು ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜ್ ಹಾಗೂ ಸಿಬ್ಬಂದಿ ವರ್ಗದವರು ಆತ್ಮೀಯವಾಗಿ ಬರಮಾಡಿಕೊಂಡರು.

ಮಲೆ ಮಾದೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಸುಮಾರು ಹತ್ತು ನಿಮಿಷಗಳ ಕಾಲ ಗರ್ಭಗುಡಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ ಪ್ರಾಧಿಕಾರದ ವತಿಯಿಂದ ನಡೆಸಲಾಗುತ್ತಿರುವ ಕಾಮಗಾರಿಗಳು ಹಾಗೂ 108 ಅಡಿ ಮಲೆಮಾದೇಶ್ವರ ಪ್ರತಿಮೆ ಬಗ್ಗೆ ಮಾಹಿತಿ ಪಡೆದುಕೊಂಡು. ದಾಸೋಹ ಭವನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿ ನಂತರ ಬೆಂಗಳೂರಿನತ್ತ ತೆರಳಿದರು.

ನಟ ದರ್ಶನ್ ನೋಡಲು ನೂಕು ನುಗ್ಗಲು

ಮಲೆ ಮಹದೇಶ್ವರ ಬೆಟ್ಟಕ್ಕೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಮಲೆಮಾದೇಶ್ವರ ಬೆಟ್ಟದ ಮುಂಭಾಗ ಜಮಾಯಿಸಿದ್ದರು. ದರ್ಶನ್ ರವರನ್ನು ನೋಡಲು ಹಾಗೂ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಒಬ್ಬರಿಗೊಬ್ಬರು ಮೇಲೆ ಬಿದ್ದ ಪರಿಣಾಮ ನೂಕುನುಗ್ಗಲು ಉಂಟಾಯಿತು..ಈ ವೇಳೆ ಪೊಲೀಸ್ ಸಿಬ್ಬಂದಿಗಳು ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು ದರ್ಶನ್ ಅವರಿಗೆ ದೇವಾಲಯಕ್ಕೆ ತೆರಳಲು ಅನುವು ಮಾಡಿಕೊಟ್ಟರು. ಪೂಜೆ ಸಲ್ಲಿಸಿ ಹೊರಬರುವ ವೇಳೆ ಅಭಿಮಾನಿಗಳತ್ತ ಕೈಬೀಸಿ ನಮಸ್ಕರಿಸಿದರು.