'ಬೆಳವಣಿಗೆ ಗಮನಿಸಿ ತೀರ್ಮಾನ'

'ಬೆಳವಣಿಗೆ ಗಮನಿಸಿ ತೀರ್ಮಾನ'

ಕೊಪ್ಪಳ: ಮಾಜಿ ಸಚಿವ ಹಾಗೂ ಗಂಗಾವತಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಇಕ್ಬಾಲ್‌ ಅನ್ಸಾರಿ ಆಪ್ತರಾಗಿದ್ದ ಹನುಮಂತಪ್ಪ ಅರಸಿನಕೇರಿ ಅವರ ವನಬಳ್ಳಾರಿ ಮನೆಗೆ ಮಂಗಳವಾರ ಜನಾರ್ದನ ರೆಡ್ಡಿ ಭೇಟಿ ನೀಡಿ ಮಾತುಕತೆ ನಡೆಸಿದರು.

ಇತ್ತೀಚೆಗಷ್ಟೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಘೋಷಣೆ ಮಾಡಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವೆ ಎಂದು ಹೇಳಿರುವ ರೆಡ್ಡಿ ಅವರ ಹನುಮಂತಪ್ಪ ಮನೆಗೆ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಪಕ್ಷದಲ್ಲಿ ನಡೆದ ಬೆಳವಣಿಗೆ ಬಗ್ಗೆ ಬೇಸರ ವ್ಯಕ್ತಪಡಿಸಿ ಇತ್ತೀಚೆಗೆ ಪೋಸ್ಟ್‌ ಹಾಕಿದ್ದ ಹನುಮಂತಪ್ಪ 'ಸಕ್ರಿಯ ರಾಜಕಾರಣದಿಂದ ದೂರ ಉಳಿಯುವೆ' ಎಂದಿದ್ದರು. ಬೇಸರ ಕಳೆಯುವ ಸಲುವಾಗಿ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿದ್ದರು.

ಈ ಸಮಯದಲ್ಲಿಯೇ ರೆಡ್ಡಿ ಹಾಗೂ ಇಕ್ಬಾಲ್‌ ಅನ್ಸಾರಿ ಇಬ್ಬರೂ ಹನುಮಂತಪ್ಪ ಅವರನ್ನು ಸಂಪರ್ಕಿಸಲು ಶತಪ್ರಯತ್ನ ಮಾಡಿದ್ದರೂ ಸಿಕ್ಕಿರಲಿಲ್ಲ. ಮಂಗಳವಾರ ವಿಜಯಪುರಕ್ಕೆ ತೆರಳಿದ್ದ ರೆಡ್ಡಿ ವಾಪಸ್‌ ಬರುವಾಗ ಮಾರ್ಗಮಧ್ಯದಲ್ಲಿ ವನಬಳ್ಳಾರಿಯಲ್ಲಿ ಹನುಮಂತಪ್ಪ ಅವರನ್ನು ಭೇಟಿಯಾಗಿದ್ದಾರೆ.

ಇದರ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಹನುಮಂತಪ್ಪ 'ಕಾಂಗ್ರೆಸ್‌ನಲ್ಲಿಯೇ ಇರುವೆ. ಆದರೆ, ಸಕ್ರಿಯ ರಾಜಕಾರಣಕ್ಕೆ ಬರುವುದಿಲ್ಲ ಎನ್ನುವ ನನ್ನ ಮನದ ಇಂಗಿತವನ್ನು ರೆಡ್ಡಿ ಅವರ ಮುಂದೆ ಹೇಳಿದ್ದೇನೆ. ಯಾವ ಪಕ್ಷಗಳಿಗೂ ಹೋಗುವುದಿಲ್ಲ. ಇಕ್ಬಾಲ್‌ ಅನ್ಸಾರಿಗೆ ಈಗಲೂ ಗೌರವ ಕೊಡುವೆ. ನನ್ನ ಮನೆಗೆ ಯಾರೇ ಬಂದರೂ ಗೌರವ ಸಲ್ಲಿಸುವುದು ಸಂಪ್ರದಾಯ' ಎಂದರು.

ನಿಮ್ಮ ಮುಂದಿನ ರಾಜಕೀಯ ನಡೆ ಏನು ಎನ್ನುವ ಪ್ರಶ್ನೆಗೆ 'ರೆಡ್ಡಿ ಅವರು ನಮ್ಮ ಮನೆಗೆ ಬಂದು ಹೋಗಿದ್ದಾರೆ. ಇದರಿಂದ ಮುಂದೆ ಆಗುವ ಬೆಳವಣಿಗೆಗಳನ್ನು ಗಮನಿಸಿ ತೀರ್ಮಾನ ಕೈಗೊಳ್ಳುತ್ತೇನೆ. ಸದ್ಯಕ್ಕಂತೂ ಕಾಂಗ್ರೆಸ್‌ನಲ್ಲಿರುವೆ' ಎಂದು ತಿಳಿಸಿದರು.

ನಾನು ಹೇಳಿದ ಒಂದಷ್ಟು ವಿಷಯಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಮಾತಿಗೆ ಬೆಲೆ ಸಿಗದ ಕಾರಣ ಮಾನಸಿಕವಾಗಿ ಸಾಕಷ್ಟು ಬೇಸರವಾಗಿದೆ.
ಹನುಮಂತಪ್ಪ ಅರಸಿನಕೇರಿ, ಕಾಂಗ್ರೆಸ್‌ ಮುಖಂಡ