ಬಿಜೆಪಿ 5 ಕ್ಷೇತ್ರಗಳಲ್ಲಿ ಗೆದ್ದರೆ ರಾಜಕೀಯ ಸನ್ಯಾಸ: ಶಾಸಕ ರಾಜಶೇಖರ ಪಾಟೀಲ

ಹುಮನಾಬಾದ್: 'ಬೀದರ್ ಜಿಲ್ಲೆಯ ಎಲ್ಲ 6 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಯಂತೆ 6 ಕ್ಷೇತ್ರ ಬೇಡ, ಬಿಜೆಪಿ 5 ಕ್ಷೇತ್ರದಲ್ಲಿ ಗೆದ್ದರೆ ನಾನು ರಾಜಕೀಯ ಸನ್ಯಾಸ ಸ್ವೀಕರಿಸಲು ಸಿದ್ಧನಿದ್ದೇನೆ.
'ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಆದರೆ ಈ ಅಭಿವೃದ್ಧಿ ಕಾಮಗಾರಿಗಳು ಬಿಜೆಪಿಯ ಮುಖಂಡರಿಗೆ ಕಾಣುತ್ತಿಲ್ಲ. ಏಕೆಂದರೆ ಅವರಿಗೆ ಕಾಮಾಲೆ (ಕಾಮಣಿ) ಆಗಿದೆ. ಹೀಗಾಗಿ ಕಾಮಾಲೆ ಕಣ್ಣಿಗೆ ಕಂಡಿದ್ದೆಲ್ಲವೂ ಹಳದಿ ಆಗಿಯೇ ಕಾಣಿಸುತ್ತದೆ' ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.
'ಕಾಂಗ್ರೆಸ್ ಪಕ್ಷದಲ್ಲಿಯೇ ಹೆಸರು ಮಾಡಿ ಇಂದು ಕಾಂಗ್ರೆಸ್ ಪಕ್ಷವನ್ನೇ ಮುಕ್ತ ಮಾಡುತ್ತೇವೆ ಎಂದು ಕೆಲವರು ಹೇಳುತ್ತಿದ್ದಾರೆ. 120 ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಮುಕ್ತ ಮಾಡಲು ಯಾರಿಂದಲೂ ಸಾಧ್ಯವಿಲ್ಲ' ಎಂದರು.
'ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಫೆ.4ರಂದು ಸಂಜೆ 5.30ಕ್ಕೆ ಹುಮನಾಬಾದ್ ಪಟ್ಟಣದಲ್ಲಿ ನಡೆಯುವ 'ಪ್ರಜಾ ಧ್ವನಿ' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು' ಎಂದು ಮನವಿ ಮಾಡಿದರು.
ಪುರಸಭೆ ಅಧ್ಯಕ್ಷೆ ನೀತು ಶರ್ಮಾ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ತಾ.ಪಂ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಫ್ಸರ್‌ಮಿಯ, ಮಲ್ಲಿಕಾರ್ಜುನ ಮಾಶೆಟ್ಟಿ, ಉಮೇಶ ಜಮಗಿ ಇದ್ದರು.