ಫೆ.24 ರಂದು ಮೇಘಾಲಯಕ್ಕೆ ಪ್ರಧಾನಿ ಮೋದಿ ಭೇಟಿ ; 'ಮೆಗಾ ರೋಡ್ ಶೋ' ನಲ್ಲಿ ಭಾಗಿ

ನವದೆಹಲಿ : ಫೆ.24 ರಂದು ಪ್ರಧಾನಿ ಮೋದಿಯವರು (PM Modi) ಮೇಘಾಲಯಕ್ಕೆ ಭೇಟಿ ನೀಡಲಿದ್ದಾರೆ. ಆ ಸಮಯದಲ್ಲಿ ತುರಾದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದು, ಅದೇ ದಿನ ಶಿಲ್ಲಾಂಗ್‌ನಲ್ಲಿ ಚುನಾವಣಾ ಪ್ರಚಾರದ ಭಾಗವಾಗಿ ರೋಡ್ ಶೋ (road show)ನಡೆಸಲಿದ್ದಾರೆ ಎನ್ನಲಾಗುತ್ತಿದೆ.
ಪ್ರಧಾನಿಯವರು ನಾಗಾಲ್ಯಾಂಡ್‌ಗೆ ಭೇಟಿ ನೀಡಲಿದ್ದು, ಚುನಾವಣಾ ಪ್ರಚಾರದ ಭಾಗವಾಗಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇನ್ನು ಅದೇ ಸಮಯದಲ್ಲಿ ಮೇಘಾಲಯದ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಪಿಎಂ ಕಚೇರಿ ಮಾಹಿತಿ ನೀಡಿದೆ.
ಇದು 2023 ರಲ್ಲಿ ಪ್ರಧಾನಿ ಮೋದಿಯವರ ಮೊದಲ ಮೇಘಾಲಯ ಭೇಟಿಯಾಗಿದೆ. ಇದಕ್ಕೂ ಮುನ್ನ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಬುಧವಾರ (ಫೆಬ್ರವರಿ 15) ರಾಜ್ಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ಮೇಘಾಲಯಕ್ಕೆ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರು.
ಮೇಘಾಲಯ ಮತ್ತು ನಾಗಾಲ್ಯಾಂಡ್ ಎರಡೂ ರಾಜ್ಯಗಳಿಗೆ ಫೆ. 27 ರಂದು (ಸೋಮವಾರ) ಮತದಾನ ನಡೆಯಲಿದ್ದು, ಮಾರ್ಚ್ 2 ರಂದು ಮತ ಎಣಿಕೆ ನಡೆಯಲಿದೆ.