ಪುನೀತ್ ಉಪಗ್ರಹ' ಉಡಾವಣೆ ಯಾವಾಗ? ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ವಿವಿಧ ಚಟುವಟಿಕೆಗೆ ಪ್ಲಾನ್

ಅಪ್ಪು ನಿಧನ ಹೊಂದಿ ಇದೇ ತಿಂಗಳ 29ಕ್ಕೆ ವರ್ಷ ತುಂಬಲಿದೆ. ಪುನೀತ್ ರಾಜ್ ಕುಮಾರ್ ದೈಹಿಕವಾಗಿ ದೂರವಾಗಿದ್ದರೂ ಸಹ ಅವರ ಅಭಿಮಾನಿಗಳು ನೇತ್ರದಾನ ರೀತಿಯ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಅವರನ್ನು ಇನ್ನೂ ಜೀವಂತವಾಗಿರಿಸಿಕೊಂಡಿದ್ದಾರೆ.
ಒಂದೆಡೆ ಅಪ್ಪು ಅಭಿಮಾನಿಗಳು ಪುನೀತ್ ಹೆಸರಿನಡಿಯಲ್ಲಿ ಹಲವಾರು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರೆ ಮತ್ತೊಂದೆಡೆ ರಾಜ್ಯ ಸರ್ಕಾರ ಕೂಡ ಪುನೀತ್ ನೆನಪಿನಲ್ಲಿ ಉತ್ತಮ ಯೋಜನೆ ಹಾಗೂ ಕೆಲಸಗಳನ್ನು ಕೈಗೊಳ್ಳುತ್ತಿದೆ.
ಬೆಂಗಳೂರಿನ ಮಲ್ಲೇಶ್ವರಂ 18ನೇ ಅಡ್ಡ ರಸ್ತೆ ಬಳಿಯ ಸರ್ಕಾರಿ ಬಾಲಕರ ಶಾಲೆಯಲ್ಲಿ ನಗರದ ವಿವಿಧ ಶಾಲೆಗಳ 200 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ನಿರ್ಮಾಣವಾಗುತ್ತಿರುವ ಪುನೀತ್ ಉಪಗ್ರಹ ನವೆಂಬರ್ - ಡಿಸೆಂಬರ್ ತಿಂಗಳ ವೇಳೆಯಲ್ಲಿ ಬಾಹ್ಯಾಕಾಶಕ್ಕೆ ಹಾರಲಿದೆ ಎಂಬ ವಿಷಯವನ್ನು ಇದೀಗ ಸಚಿವ ಅಶ್ವತ್ಥ್ ನಾರಾಯಣ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಈ ಕುರಿತಾಗಿ ವಿಶೇಷ ಪೋಸ್ಟ್ ಹಂಚಿಕೊಂಡಿರುವ ಅಶ್ವತ್ಥ್ ನಾರಾಯಣ್ ಅಪ್ಪು ನೆನಪಿಗೋಸ್ಕರ ಉಪಗ್ರಹ ಉಡಾವಣೆ ಮಾಡುವ ಸಂದರ್ಭದಲ್ಲಿ ರಾಜ್ಯಾದ್ಯಂತ ಶಾಲಾ ಮತ್ತು ಕಾಲೇಜುಗಳಲ್ಲಿ ವಿವಿಧ ಚಟುವಟಿಕೆಗಳನ್ನು ಕೂಡ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಶ್ವತ್ಥ್ ನಾರಾಯಣ್ ಮಾಡಿರುವ ಪೋಸ್ಟ್ ಹೀಗಿದೆ:
ಸಾಮಾಜಿಕ ಬದ್ಧತೆಯ ಜೀವನ ನಡೆಸಿದ ನಮ್ಮ ಹೆಮ್ಮೆಯ ಡಾ. ಪುನೀತ್ ರಾಜ್ಕುಮಾರ್ ಅವರ ಗೌರವಾರ್ಥ, ಮಾರ್ಗದರ್ಶನದಲ್ಲಿ ಸರ್ಕಾರಿ ಶಾಲಾ ಮಕ್ಕಳಿಂದ "ಪುನೀತ್ ಉಪಗ್ರಹ" ಹೆಸರಿನ ಉಪಗ್ರಹ ತಯಾರಿಸಿ, ಉಡಾವಣೆ ಮಾಡಲು ನಿರ್ಧರಿಸಲಾಗಿದೆ.
ನಮ್ಮ ಮಲ್ಲೇಶ್ವರದ 18ನೇ ಅಡ್ಡ ರಸ್ತೆ ಬಳಿಯ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ, ಬೆಂಗಳೂರು ವಿಭಾಗದ 200ವಿದ್ಯಾರ್ಥಿಗಳಿಂದ ನಿರ್ಮಾಣವಾಗುತ್ತಿರುವ "ಪುನೀತ್ ಉಪಗ್ರಹ" ನವೆಂಬರ್-ಡಿಸೆಂಬರ್ ವೇಳೆಗೆ ನಭಕ್ಕೆ ಜಿಗಿಯಲಿದೆ.
ಈ ಎಲ್ಲಾ ವಿದ್ಯಾರ್ಥಿಗಳು, ಸಂಬಂಧಪಟ್ಟ ಶಿಕ್ಷಕರಿಗೆ ಉಪಗ್ರಹದ ಕುರಿತ ಮೂಲಭೂತ ಅಂಶಗಳ ಬಗ್ಗೆ ತರಬೇತಿ ನೀಡಲಾಗಿದೆ.
ಈ ಮೂಲಕ ನಮ್ಮ ಪ್ರೀತಿಯ ಅಪ್ಪು ಅವರಿಗೆ ಗೌರವ ಸಲ್ಲಿಸುವ ಜತೆ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ತಂತ್ರಜ್ಞಾನದ ಅರಿವು ಮೂಡಿಸುವ ಆಶಯ ನಮ್ಮದು.
ಈ ದಿಶೆಯಲ್ಲಿ ರಾಜ್ಯಾದ್ಯಂತ ಶಾಲಾ, ಕಾಲೇಜುಗಳಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಯ್ದ ವಿದ್ಯಾರ್ಥಿಗಳು ಉಪಗ್ರಹ ಉಡಾವಣೆಯನ್ನು ಶ್ರೀಹರಿಕೋಟದಿಂದ ನೇರವಾಗಿ ವೀಕ್ಷಿಸಲಿದ್ದಾರೆ.