ಪಿಡಬ್ಲ್ಯೂಡಿ ಎಇ ಜಗದೀಶ್‌ಗೆ ಜಾಮೀನು ಮಂಜೂರು

ಪಿಡಬ್ಲ್ಯೂಡಿ ಎಇ ಜಗದೀಶ್‌ಗೆ ಜಾಮೀನು ಮಂಜೂರು

ಬೆಂಗಳೂರು: ವಿಧಾನಸೌಧದಲ್ಲಿ 10 ಲಕ್ಷ ರೂ. ನಗದು ಪತ್ತೆಯಾಗಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದು, ಆರೋಪಿ ಪಿಡಬ್ಲ್ಯೂಡಿ ಎಇ ಜಗದೀಶ್‌ಗೆ 1ನೇ ಮೆಯೋ ಹಾಲ್‌ ಕೋರ್ಟ್‌ನಿಂದ ಜಾಮೀನು ಸಿಕ್ಕಿದೆ.

ಆರೋಪಿ ಜಗದೀಶ್‌ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.

ಮೆಯೋಹಾಲ್‌ ಕೋರ್ಟ್‌ ಮುಂದೆ ಜಗದೀಶ್‌ ಅವರನ್ನು ಪೊಲೀಸರು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್‌ ನಾನ್‌ ಕಾಗ್ನಿಜಿಯೇಬಲ್‌ ಸೆಕ್ಷನ್‌ ಆಗಿರುವುದರಿಂದ ಜಗದೀಶ್‌ಗೆ ಜಾಮೀನು ಮಂಜೂರು ಮಾಡಿದೆ.

ಹಣ ಪತ್ತೆ ಪ್ರಕರಣ ಸಂಬಂಧ ವಿಧಾನಸೌಧ ಠಾಣೆ ಪೊಲೀಸರು ಜಗದೀಶ್‌ ಅವರನ್ನು ಗುರುವಾರ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಹಣದ ಮೂಲದ ಬಗ್ಗೆ ಜಗದೀಶ್‌ ಇನ್ನೂ ಸುಳಿವು ಕೊಟ್ಟಿಲ್ಲ. ವಿಚಾರಣೆ ವೇಳೆ ಗೊಂದಲದ ಹೇಳಿಕೆ ಕೊಟ್ಟಿದ್ದಾರೆಂದು ತಿಳಿದು ಬಂದಿದೆ. ವಿಧಾನಸೌಧದಲ್ಲಿರುವ ಅಧಿಕಾರಿಗಳಿಗೆ ಲಂಚದ ರೂಪದಲ್ಲಿ ಕೊಡಲು ಈ ಹಣ ತಂದಿರುವ ಬಗ್ಗೆ ಅನುಮಾನ ಉಂಟಾಗಿದೆ.

ಆದರೆ, ಜಗದೀಶ್‌ ವಿರುದ್ಧ ದಾಖಲಾಗಿದ್ದ ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅದರ ಇತ್ಯರ್ಥಕ್ಕಾಗಿ ಬೆಂಗಳೂರಿಗೆ ಹಣ ತಂದಿದ್ದರು. ಆ ಸಂದರ್ಭದಲ್ಲೇ ತುರ್ತಾಗಿ ಅಧಿಕಾರಿಯೊಬ್ಬರನ್ನು ಭೇಟಿ ಮಾಡಬೇಕಿತ್ತು. ಹೀಗಾಗಿ ಹಣದ ಸಮೇತ ವಿಧಾನಸೌಧಕ್ಕೆ ಹೋಗಿದ್ದರು ಎಂದು ಆರೋಪಿ ಜಗದೀಶ್‌ ಪರ ವಕೀಲ ರಾಜು ಅವರ ವಾದವಾಗಿದೆ.

ಹಣಕ್ಕೆ ಸಂಬಂಧಿಸಿದ ದಾಖಲೆ ನೀಡಿದ್ದೇನೆ : ಜಗದೀಶ್‌
ಬೆಂಗಳೂರು: ವಿಧಾನಸೌಧದಲ್ಲಿ ದೊರೆತ ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದ್ದೇನೆ. ನ್ಯಾಯಾಲಯ ಜಾಮೀನು ನೀಡಿದೆ. ಇದು ಅಕ್ರಮ ಹಣವಲ್ಲ ಎಂದು ಪಿಡಬ್ಲ್ಯೂಡಿ ಇಂಜಿನಿಯರ್‌ ಜಗದೀಶ್‌ ಹೇಳಿದರು.

ಜಾಮೀನು ಪಡೆದು ಬಂದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಮಾಹಿತಿ ಕೊರತೆಯಿಂದಾಗಿ ತಪ್ಪಾಗಿ ಅರ್ಥೈಸಿ ಪೊಲೀಸರು ವಶಕ್ಕೆ ಪಡೆದಿದ್ದರು. ನಾನು ವೈಯಕ್ತಿಕ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ಕೋರ್ಟ್‌ ಮೂಲಕ ಹಳೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಲವು ಜನರಿಂದ ಹಣ ಸಂಗ್ರಹಿಸಿಕೊಂಡು ತಂದಿದ್ದೆ. ಕೆಲಸ ಮುಗಿಸಿಕೊಂಡು ಮಂಡ್ಯಕ್ಕೆ ಹಿಂತಿರುಗಿಸಬೇಕಾಗಿತ್ತು.

ತುರ್ತಾಗಿ ಎಸ್ಟಿಮೇಟ್‌ವೊಂದರ ಕಾರ್ಯ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ವಿಕಾಸ ಸೌಧಕ್ಕೆ ಹೊರಟಿದ್ದೆ. ಆದರೆ, ಆ ದಿನ ತಡವಾದ ಹಿನ್ನೆಲೆಯಲ್ಲಿ ಮತ್ತೆ ಹಿಂತಿರುಗಿದೆ. ಆ ವೇಳೆ ವಿಧಾನಸೌಧದಲ್ಲಿ ಭದ್ರತೆಗಿದ್ದ ಪೊಲೀಸರು ನನ್ನ ಬ್ಯಾಗ್‌ ಪರಿಶೀಲಿಸಿದರು. ನಾನು ಹೆಚ್ಚಾಗಿ ಕಾರಿನಲ್ಲೇ ಬರುತ್ತೇನೆ.

ಅಷ್ಟೊಂದು ಹಣ ತೆಗೆದುಕೊಂಡು ಹೋಗಬಾರದು ಎಂಬುದು ನನಗೆ ತಿಳಿದಿದೆ. ಆದರೆ, ಆ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ತೋಚದೇ ಕೈಯಲ್ಲೇ ಹಣವಿದ್ದ ಬ್ಯಾಗ್‌ ತೆಗೆದುಕೊಂಡು ಹೋದೆ ಎಂದು ಹೇಳಿದರು.