ಪಾಲಿಕೆ ಹಣ ಅಭಿವೃದ್ಧಿ ಕಾರ್ಯಗಳಿಗಿಲ್ಲ: ಆರೋಪ

ಪಾಲಿಕೆ ಹಣ ಅಭಿವೃದ್ಧಿ ಕಾರ್ಯಗಳಿಗಿಲ್ಲ: ಆರೋಪ

ಹುಬ್ಬಳ್ಳಿ, ಅ18: ಹು.ಧಾ. ಮಹಾನಗರ ಪಾಲಿಕೆಯಲ್ಲಿ ಸಮಾರಂಭಗಳಿಗೆ ಹಣ ಪೋಲು ಆಗುತ್ತಿದೆ. ಆದರೆ ಅಭಿವೃದ್ಧಿ ಕಾರ್ಯಗಳಿಗೆ ಆಗುತ್ತಿಲ್ಲ. ಈ ಕುರಿತು ನಿಜ ಸ್ಥಿತಿಗಾಗಿ ಕೂಡಲೇ ಪಾಲಿಕೆ ಸಾಮಾನ್ಯಸಭೆ ಕರೆಯಬೇಕು ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ದೊರೆರಾಜ ಮಣಿಕುಂಟ್ಲ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಹಣವಿಲ್ಲದೇ ನರಳುವ ಸ್ಥಿತಿಯಲ್ಲಿರುವಾಗ ಒಂದೂವರೆ ಕೋಟಿ ರೂ. ವೆಚ್ಚ ಮಾಡಿ ಸನ್ಮಾನ ಸಮಾರಂಭ ಮಾಡಿದ್ದು ಏತಕ್ಕೆ? ಎಂದು ಪ್ರಶ್ನಿಸಿದರು.
ಪಾಲಿಕೆಗೆ ಹಣ ಬಂದಿದೆ, ಆದರೆ ಅದು ಅಭಿವೃದ್ಧಿ ಕಾರ್ಯಗಳಿಗೆ ವೆಚ್ಚವಾಗುತ್ತಿಲ್ಲ ಎಂದು ಅವರು ಟೀಕಿಸಿದರು.
ದೀಪಾವಳಿ ಹಬ್ಬದೊಳಗಾಗಿ, ಪಾಲಿಕೆ ಸಾಮಾನ್ಯ ಸಭೆ ಕರೆಯದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದ ಅವರು ಸಭೆಗೆ ಮೇಯರ್ ಗೌನ್ ಧರಿಸಿಯೇ ಬರಬೇಕು, ಇಲ್ಲದಿದ್ದರೆ ಸಭೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಇಮ್ರಾನ್ ಯಲಿಗಾರ, ಕವಿತಾ ಕಬ್ಬೇರ, ಸಂದೀಲಕುಮಾರ, ಇಕ್ಬಾಲ ನವಲೂರ ಉಪಸ್ಥಿತರಿದ್ದರು.