ಪದ್ಮಶ್ರೀ ಪುರಸ್ಕೃತ 'ಅಕ್ಷರ ಸಂತ' ನಂದಾ ಸರ್ ಇನ್ನಿಲ್ಲ: ಇಳಿ ವಯಸ್ಸಲ್ಲೂ ಇವರ ಸೇವೆಯೇ ಅಮೋಘ
ಜೈಪುರ (ಒಡಿಶಾ): ಈ ಬಾರಿ 'ಪದ್ಮ' ಪ್ರಶಸ್ತಿ ಪುರಸ್ಕೃತರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪುರಸ್ಕರಿಸುವ ಸಮಯದಲ್ಲಿ ಅಪರೂಪದ ವ್ಯಕ್ತಿಗಳಂತೆ ಕಂಡ ಕೆಲವರಲ್ಲಿ ಒಡಿಶಾದ ಜೈಪುರ ಜಿಲ್ಲೆಯ ಕಂಠೀರ ಗ್ರಾಮದಲ್ಲಿ ನಂದಕಿಶೋರ್ ಪ್ರಸ್ಟಿ (ನಂದಾ ಮಾಸ್ಟರ್) ಕೂಡ ಒಬ್ಬರು.
ಅಕ್ಷರ ಸಂತ ಎಂದೇ ಖ್ಯಾತಿ ಪಡೆದಿದ್ದ ನಂದಾ ಸರ್, ತಮ್ಮ ತುಂಬು ಜೀವನವನ್ನು ಮುಗಿಸಿ ಇಹಲೋಕ ತ್ಯಜಿಸಿದ್ದಾರೆ. 75 ವರ್ಷಗಳವರೆಗೆ ಅಕ್ಷರ ಸೇವೆಯಲ್ಲಿ ತೊಡಗಿಸಿಕೊಂಡು ಲಕ್ಷಾಂತರ ಬಡವರಿಗೆ ಅಕ್ಷರ ದಾನ ಮಾಡಿದ್ದ ಇವರನ್ನು ಕೋವಿಡ್ ಬಲಿ ಪಡೆದುಕೊಂಡಿದೆ.
ಕರೊನಾ ಸೋಂಕಿಗೊಳಗಾಗಿ ನವೆಂಬರ್ 30ರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ನಂದಾ ಸರ್, ನಂದಾ ಮಾಸ್ಟರ್ ಎಂದೇ ಪರಿಚಿತರಾಗಿರುವ ಈ ಅಕ್ಷರ ಸಂತ ಕಳೆದ 75 ವರ್ಷಗಳಿಂದ ತಮ್ಮ ಗ್ರಾಮದ ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ಪಾಠ ಮಾಡುತ್ತಿದ್ದರು.
1946ರಿಂದಲೂ ಉಚಿತವಾಗಿ ಶಿಕ್ಷಣ ನೀಡುತ್ತ ಬಂದಿದ್ದ ಇವರು,ವಯಸ್ಸು 100 ದಾಟಿದ್ದರೂ ಇವರ ಉತ್ಸಾಹಕ್ಕೆ ಸಾಟಿಯೇ ಇರಲಿಲ್ಲ. ಮರದ ಕೆಳಗೆ ಕುಳಿತು ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಇದಾಗಲೇ ಲಕ್ಷಾಂತರ ಮಕ್ಕಳಿಗೆ ಉಚಿತವಾಗಿ ಅಕ್ಷರದಾನ ಮಾಡಿದ್ದಾರೆ. ಇವರ ಸೇವೆಗೆ ಈ ಸಾಲಿನ (2020) ಪದ್ಮಶ್ರೀ ಪ್ರಶಸ್ತಿ ಸಿಕ್ಕಿತ್ತು.