ಪಂದ್ಯಾವಳಿಗೂ ಮುನ್ನ CSK, LSGಗೆ ಭಾರೀ ಆಘಾತ; ಗಾಯಾಳುಗಳ ಪಟ್ಟಿಗೆ ಮತ್ತಿಬ್ಬರು ಸೇರ್ಪಡೆ
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಸೀಸನ್ಗೆ ದಿನಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 31ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗುವ ಮೂಲಕ ಅದ್ಧೂರಿ ಚಾಲನೆ ಸಿಗಲಿದೆ.
ಇದೇ ವೇಳೆ ಐಪಿಎಲ್ ಪಂದ್ಯಾವಳಿ ಆರಂಭವಾಗುವ ಮುನ್ನ ಕೆಲವು ತಂಡಗಳಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಹಲವು ಆಟಗಾರರು ಗಾಯದ ಕಾರಣದಿಂದಾಗಿ 2023ರ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಜಸ್ಪ್ರೀತ್ ಬುಮ್ರಾ, ಝೈ ರಿಚರ್ಡ್ಸನ್, ರಿಷಭ್ ಪಂತ್, ಜಾನಿ ಬೈರ್ಸ್ಟೋವ್, ವಿಲ್ ಜಾಕ್ಸ್, ಕೈಲ್ ಜೇಮಿಸನ್, ಪ್ರಸಿದ್ಧ್ ಕೃಷ್ಣ, ಶ್ರೇಯಸ್ ಅಯ್ಯರ್ ಸೇರಿದಂತೆ ಕೆಲವು ಪಂದ್ಯಾವಳಿಯಿಂದ ಮಸಂಪೂರ್ಣ ಹೊರಬಿದ್ದಿದ್ದಾರೆ.
ಇದೀಗ ಗಾಯಾಳುಗಳ ಪಟ್ಟಿಗೆ ಸಿಎಸ್ಕೆ ತಂಡದ ಮುಕೇಶ್ ಚೌಧರಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೊಹ್ಸಿನ್ ಖಾನ್ ಸೇರಿದ್ದಾರೆ.
ಭಾರತದ ದೇಶೀಯ ಯುವ ಪ್ರತಿಭೆಗಳಾದ ಮುಕೇಶ್ ಚೌಧರಿ ಮತ್ತು ಮೊಹ್ಸಿನ್ ಖಾನ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಹೊರಗುಳಿಯುವ ಸಾಧ್ಯತೆಯಿದೆ. ಮುಕೇಶ್ ಚೌಧರಿ ಮತ್ತು ಮೊಹ್ಸಿನ್ ಖಾನ್ ಗಾಯಗೊಂಡು ಪ್ರಸ್ತುತ ತರಬೇತಿಗೆ ಒಳಗಾಗಿದ್ದಾರೆ.
ಐಪಿಎಲ್ 2022ರ ಐಪಿಎಲ್ ಹರಾಜಿನಲ್ಲಿ ಮುಕೇಶ್ ಚೌಧರಿ ಮತ್ತು ಮೊಹ್ಸಿನ್ ಖಾನ್ ಅವರನ್ನು ಕ್ರಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮೂಲ ಬೆಲೆ 20 ಲಕ್ಷ ರೂ.ಗೆ ಖರೀದಿಸಿವೆ.
ಮುಕೇಶ್ ಚೌಧರಿ ಕಳೆದ ಬಾರಿ ಅಡಿದ 13 ಪಂದ್ಯಗಳಿಂದ 26.50ರ ಸರಾಸರಿಯಲ್ಲಿ 16 ವಿಕೆಟ್ಗಳನ್ನು ಪಡೆದರೆ, ಮೊಹ್ಸಿನ್ ಖಾನ್ 14.07ರ ಸರಾಸರಿಯಲ್ಲಿ 14 ವಿಕೆಟ್ಗಳನ್ನು ಪಡೆದು ತಮ್ಮ ಚೊಚ್ಚಲ ಐಪಿಎಲ್ ಋತುವಿನಲ್ಲಿ ಬೌಲಿಂಗ್ನೊಂದಿಗೆ ಉತ್ತಮ ಪ್ರದರ್ಶನ ನೀಡಿದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಸಿ ವಿಶ್ವನಾಥನ್ ಪ್ರಕಾರ, "ಮುಕೇಶ್ ಚೌಧರಿ ತಂಡಕ್ಕೆ ಮರಳುವ ಬಗ್ಗೆ ಫ್ರಾಂಚೈಸಿಗೆ ಯಾವುದೇ ಭರವಸೆ ಇಲ್ಲ. 26 ವರ್ಷದ ಯುವ ಬೌಲರ್ ಕಳೆದ ವರ್ಷ ಸಿಎಸ್ಕೆ ತಂಡದ ಅತ್ಯುತ್ತಮ ಬೌಲರ್ ಆಗಿದ್ದರು. ಈ ಬಾರಿ ಅವರು ತಪ್ಪಿಸಿಕೊಂಡರೆ ಅದು ದುರದೃಷ್ಟಕರ," ಎಂದಿದ್ದಾರೆ.
ಸಿಎಸ್ಕೆ ವೇಗಿ ಮುಕೇಶ್ ಚೌಧರಿ ಕಳೆದ ವರ್ಷ ಡಿಸೆಂಬರ್ನಿಂದ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ತರಬೇತಿ ಪಡೆಯುತ್ತಿದ್ದಾರೆ. ಮುಕೇಶ್ ಚೌಧರಿ ಸುಮಾರು ಏಳು ವರ್ಷಗಳಿಂದ ದೇಶೀಯ ಮಟ್ಟದಲ್ಲಿ ಆಡುತ್ತಿದ್ದು, ಕೇವಲ 13 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.
ಐಪಿಎಲ್ನಲ್ಲಿ ಸಿಎಸ್ಕೆ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ನಂತರ ಮುಕೇಶ್ ಚೌಧರಿ ತಮ್ಮ ತವರು ರಾಜ್ಯ ಮಹಾರಾಷ್ಟ್ರ ತಂಡಕ್ಕಾಗಿ ಕೆಲವು ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ.
ಮತ್ತೊಂದೆಡೆ, ಮೊಹ್ಸಿನ್ ಖಾನ್ ಕಳೆದ ವರ್ಷ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಟಾರ್ ಪ್ರದರ್ಶನಕಾರರಲ್ಲಿ ಒಬ್ಬರಾಗಿದ್ದರು. ಅಲ್ಲದೇ, ತಮ್ಮ ಚೊಚ್ಚಲ ಐಪಿಎಲ್ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪ್ಲೇಆಫ್ ತಲುಪಲು ನೆರವಾಗಿದ್ದರು.
ಲಕ್ನೋ ಸೂಪರ್ ಜೈಂಟ್ಸ್ ತಂಡವು ಏಪ್ರಿಲ್ 1ರಂದು ಲಕ್ನೋದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ತನ್ನ ಐಪಿಎಲ್ ಅಭಿಯಾನ ಆರಂಭಿಸಲಿದೆ.