ಜೈದೇವ್ ಉನದ್ಕತ್ ದಾಖಲೆ: ದೆಹಲಿ ದೂಳೀಪಟ

ರಾಜ್‌ಕೋಟ್: ಎಡಗೈ ಮಧ್ಯಮವೇಗಿ ಜೈದೇವ್ ಉನದ್ಕತ್ ರಣಜಿ ಕ್ರಿಕೆಟ್ ಟೂರ್ನಿಯ ಪಂದ್ಯದ ಮೊದಲ ಇನಿಂಗ್ಸ್‌ನ ಪ್ರಥಮ ಓವರ್‌ನಲ್ಲಿಯೇ ಹ್ಯಾಟ್ರಿಕ್ ಗಳಿಸಿ ದಾಖಲೆ ಬರೆದರು.ಈಚೆಗೆ ಬಾಂಗ್ಲಾ ಎದುರಿನ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಜೈದೇವ್ (39ಕ್ಕೆ8) ಅವರ ಅಮೋಘ ಬೌಲಿಂಗ್‌ನಿಂದ ಸೌರಾಷ್ಟ್ರ ತಂಡವು ಇಲ್ಲಿ ಮಂಗಳವಾರ ಆರಂಭವಾದ ಬಿ ಗುಂಪಿನ ಪಂದ್ಯದಲ್ಲಿ ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿತು.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ದೆಹಲಿ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆತಿಥೇಯ ತಂಡದ ನಾಯಕ ಜೈದೇವ್ ಮೊದಲ ಓವರ್‌ನಲ್ಲಿ ದೆಹಲಿಯ ಧ್ರುವ್ ಶೋರೆ (0.3), ವೈಭವ್ ರಾವಳ್ (0.4) ಮತ್ತು ನಾಯಕ ಯಶ್ ಧುಳ್ (0.5) ಅವರ ವಿಕೆಟ್ ಗಳಿಸಿದರು. ಈ ಗಾಯದ ಮೇಲೆ ಎರಡನೇ ಓವರ್‌ನಲ್ಲಿ ಚಿರಾಗ್ ಜಾನಿ ಬರೆ ಹಾಕಿದರು. ಆಯುಷ್ ಬದೋನಿ ವಿಕೆಟ್ ಗಳಿಸಿದರು. ಇದರಿಂದಾಗಿ ಅಗ್ರ ನಾಲ್ವರು ಬ್ಯಾಟರ್‌ಗಳು ಖಾತೆಯನ್ನೇ ತೆರೆಯಲಿಲ್ಲ. ತಮ್ಮ ಎರಡನೇ ಓವರ್‌ನಲ್ಲಿ ಜೈದೇವ್ ಜಾಂಟಿ ಸಿಧು ಹಾಗೂ ಲಲಿತ್ ಯಾದವ್ ವಿಕೆಟ್ ಕೂಡ ಕಬಳಿಸಿದರು. ಇನ್ನೊಂದು ಓವರ್‌ನಲ್ಲಿ ಲಕ್ಷ್ಯ ವಿಕೆಟ್ ಕೂಡ ಅವರ ಪಾಲಾಯಿತು.