ಜೆಡಿಎಸ್ ರಾಜ್ಯ ಕಾರ್ಯದರ್ಶಿ, ವಕ್ತಾರ ಸ್ಥಾನಕ್ಕೆ ಸಂಕೇತ್ ಪೂವಯ್ಯ ರಾಜೀನಾಮೆ, ಇಂದು ಕಾಂಗ್ರೆಸ್ ಸೇರ್ಪಡೆ

ಮಡಿಕೇರಿ: ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರೆಂದೇ ಗುರ್ತಿಸಿಕೊಂಡಿದ್ದವರು ಸಂಕೇತ್ ಪೂವಯ್ಯ. ಅವರು ಇದೀಗ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹಾಗೂ ವಕ್ತಾರ ಸ್ಥಾನ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಇನ್ನೂ ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿರುವಂತ ಸಂಕೇತ್ ಪೂವಯ್ಯ ಅವರು, ಇಂದು ವಿರಾಜಪೇಟೆಯಲ್ಲಿ ನಡೆಯಲಿರುವಂತ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶದಲ್ಲಿ ಅಧಿಕೃತವಾಗಿ ಕೈ ಹಿಡಿಯಲಿದ್ದಾರೆ.
ಜೆಡಿಎಸ್ ಪಕ್ಷದ ವರಿಷ್ಠ ಹೆಚ್ ಡಿ ದೇವೇಗೌಡ ಅವರಿಗೆ ರಾಜೀನಾಮೆ ಪತ್ರವನ್ನು ಬರೆದಿದ್ದು, ಅದರಲ್ಲಿ ವಿರಾಜಪೇಟೆ ಕ್ಷೇತ್ರದಲ್ಲಿ ಜಾತ್ಯಾತೀತ ಮತಗಳ ವಿಭಜನೆ ನಡೆದು, ಬಿಜೆಪಿ ಗೆಲುವನ್ನು ತಡೆಯುವ ಉದ್ದೇಶದಿಂದ ಮಾತ್ರವೇ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಲು ನಿರ್ಧರಿಸಿರೋದಾಗಿ ಹೇಳಿದ್ದಾರೆ.
ಒಂದೆಡೆ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟುವ ಕಾಯಕದಲ್ಲಿ ನಿರತರಾಗಿರುವಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪಂಚರತ್ನ ರಥಯಾತ್ರೆಯನ್ನು ನಡೆಸುತ್ತಿದ್ದಾರೆ. ಮತ್ತೊಂದೆಡೆ ಜೆಡಿಎಸ್ ಪಕ್ಷದ ನಾಯಕರು ವಿವಿಧೆಡೆ ಪಕ್ಷಕ್ಕೆ ಗುಡ್ ಬೈ ಹೇಳಿ ಇತರೆ ಪಕ್ಷಗಳನ್ನು ಸೇರುತ್ತಿರೋದು ಕಂಡು ಬರುತ್ತಿದೆ.
ಇಂದು ಶಿವಮೊಗ್ಗ ಜಿಲ್ಲೆಯಲ್ಲಿ 2 ನೇ ದಿನ ಪಂಚರತ್ನ ರಥಯಾತ್ರೆ ನಡೆಯಲಿದೆ. ಇಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಯಾತ್ರೆ ಸಂಚರಿಸಲಿದೆ. ಅರೆಬಿಳಚಿ ಕ್ಯಾಂಪ್ ನಿಂದ ಆರಂಭವಾಗಲಿರುವ ಪಂಚರತ್ನ ರಥಯಾತ್ರೆ, ನಂತರ ಕಲ್ಲಿಹಾಳ್ ಸರ್ಕಲ್, ಎಮ್ಮೆಹಟ್ಟಿ, ಹೊಳೆಹೂನ್ನೂರು,ಆನವೇರಿ, ಮಂಗೋಟಿ,ನಾಗಸಮುದ್ರ, ಹೊಳ ಲೂರು ಮಾರ್ಗವಾಗಿ ಆಯನೂರು, ಕುಂಸಿ, ಹಾರನಹಳ್ಳಿ ಸೇರಿದಂತೆ 19 ಗ್ರಾಮಗಳಲ್ಲಿ ಸಂಚಾರ ಮಾಡಲಿದೆ. ಮಲವಗೊಪ್ಪದಲ್ಲಿ ಗ್ರಾಮದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಸ್ತವ್ಯ ಮಾಡಲಿದ್ದಾರೆ.