ಖಂಡ್ರೆ ವಿಚಾರವಾಗಿ ಸ್ಪೀಕರ್‌ ಕಾಗೇರಿ ಹೇಳಿಕೆ: ಲಿಂಗಾಯತ ಸಮುದಾಯದ ಆಕ್ರೋಶ, ಬಾಲ್ಕಿಯಲ್ಲಿ ಭಾರೀ ಪ್ರತಿಭಟನೆ

ಖಂಡ್ರೆ ವಿಚಾರವಾಗಿ ಸ್ಪೀಕರ್‌ ಕಾಗೇರಿ ಹೇಳಿಕೆ: ಲಿಂಗಾಯತ ಸಮುದಾಯದ ಆಕ್ರೋಶ, ಬಾಲ್ಕಿಯಲ್ಲಿ ಭಾರೀ ಪ್ರತಿಭಟನೆ

ಬೆಂಗಳೂರು, ಫೆಬ್ರವರಿ 17: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾಂಗ್ರೆಸ್ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಅವರ ಕುರಿತಾಗಿ ನೀಡಿರುವ ಹೇಳಿಕೆಯು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಘಟನೆಗೆ ಸಂಬಂಧಿಸಿದಂತೆ ವೀರಶೈವ-ಲಿಂಗಾಯತ ಸಮುದಾಯದವರು ಖಂಡನೆ ವ್ಯಕ್ತಪಡಿಸಿದ್ದಾರೆ.

ಈಶ್ವರ ಖಂಡ್ರೆ ಪ್ರತಿನಿಧಿಸುವ ಬಾಲ್ಕಿ ಕ್ಷೇತ್ರದಲ್ಲಿ ಭಾರೀ ಪ್ರತಿಭಟನೆಗಳು ವ್ಯಕ್ತವಾಗಿದೆ. ಸ್ಪೀಕರ್‌ ಕಾಗೇರಿ ಅವರ ಕ್ಷಮೆಯಾಚಿಸಬೇಕು ಮತ್ತು ರಾಜೀನಾಮೆ ನೀಡಬೇಕು' ಎಮದು ಖಂಡ್ರೆ ಬೆಂಬಲಿಗರು ಒತ್ತಾಯಿಸಿದ್ದಾರೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶುಕ್ರವಾರ ತನ್ನ ಹೇಳಿಕೆಯಲ್ಲಿ, 'ಸಭಾಪತಿಯಾಗಿರುವ ಕಾಗೇರಿ ಅವರು ಸದನದಲ್ಲಿ ಬಿಜೆಪಿ ಪಕ್ಷದ ವಕ್ತಾರರಂತೆ ವರ್ತಿಸಿರುವುದು ದುರದೃಷ್ಟಕರ. ತಮ್ಮ ಸ್ಥಾನದ ಘನತೆಗೆ ಚ್ಯುತಿ ತರುವ ಹೇಳಿಕೆ ನೀಡಿರುವ ಸ್ಪೀಕರ್ ಕಾಗೇರಿ ಅವರು ಕೂಡಲೇ ರಾಜೀನಾಮೆ ನೀಡಬೇಕು' ಎಂದು ಮಹಾಸಭಾ ಒತ್ತಾಯಿಸಿದೆ.

'ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಅವರ ಬಗ್ಗೆ ಕಾಗೇರಿ ಹಗುರವಾದ ಹೇಳಿಕೆಗಳನ್ನು ನೀಡಿರುವುದು ಸರಿಯಲ್ಲ. ಪೂರ್ವಯೋಜಿತ ಮನಸ್ಥಿತಿಯ ಇಂತಹ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರಮುಖ ನಾಯಕ ಈಶ್ವರ ಖಂಡ್ರೆ ಮೇಲೆ ದಾಳಿ ನಡೆಸುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ' ಎಂದು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಸ್ಪೀಕರ್ ಕಾಗೇರಿ ಅವರು ಸಂವಿಧಾನವನ್ನು ಗೌರವಿಸುವವರಾಗಿದ್ದರೆ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಏನೇ ಮಾಡಿದರೂ ಅಧಿಕಾರಕ್ಕೆ ಅಂಟಿಕೊಳ್ಳುವವರು ಕಾಗೇರಿ ಎಂದು ಭಾವಿಸಬೇಕಾಗುತ್ತದೆ. ಅವರು ತಮ್ಮ ನಡವಳಿಕೆಗಳನ್ನು ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ಮಹಾಸಭಾ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಶಾಮನೂರು ತಿಳಿಸಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ವಿವಾದಿತ ಹೇಳಿಕೆಯನ್ನು ನೀಡಿದ್ದರು. ಮಂಡ್ಯದಲ್ಲಿ ನಡೆದಿದ್ದ ಸಾರ್ವಜನಿಕ ಸಭೆಯಲ್ಲಿ, ಸಿಎನ್‌ ಅಶ್ವತ್ಥ್‌ ನಾರಾಯಣ ಅವರು 'ಟಿಪ್ಪುವಿನಂತೆ ಸಿದ್ದರಾಮಯ್ಯನವರನ್ನೂ ಮುಗಿಸಿಬಿಡಿ' ಎಂದು ಕರೆ ನೀಡಿದ್ದರು. ಇದು ರಾಜ್ಯದಾದ್ಯಂತ ವಿವಾದದ ಸ್ಪರೂಪವನ್ನು ಪಡೆದುಕೊಂಡಿತ್ತು ಇದರ ವಿರುದ್ಧ ವಿಧಾನಸಭೆಯಲ್ಲಿ ಈಶ್ವರ ಖಂಡ್ರೆ ಅವರು ಪ್ರತಿಭಟನೆ ನಡೆಸುತ್ತಿದ್ದರು. ಆ ವೇಳೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೋಪಗೊಂಡರು. ಆ ನಂತರ ಖಂಡ್ರೆ ಅವರನ್ನು ತರಾಟೆಗೆ ತೆಗೆದುಕೊಂಡರು.

ಶಾಸಕ ಈಶ್ವರ ಖಂಡ್ರೆ ಅವರನ್ನು ಉದ್ದೇಶಿಸಿ ಮಾತನಾಡಿದ ಸ್ಪೀಕರ್, 'ನೀವು ಕುಳಿತುಕೊಳ್ಳಬೇಕು. ನಾನು ಇಲ್ಲಿಯವರೆಗೆ ಎದ್ದು ನಿಂತಿಲ್ಲ. ಕುಳಿತುಕೊಳ್ಳಲು ಕೇಳಿದರೆ, ನೀವು ಕುಳಿತುಕೊಳ್ಳಬೇಕು. ಮಿಸ್ಟರ್ ಈಶ್ವರ್ ಖಂಡ್ರೆ, ನೀವು ತುಂಬಾ ನಟಿಸುತ್ತಿದ್ದೀರಿ. ನಿಮ್ಮ ನಡವಳಿಕೆ ಈ ಸದನಕ್ಕೆ ಗೌರವ ತರುವುದಿಲ್ಲ. ನೀವು ಕಾರ್ಯಾಧ್ಯಕ್ಷರು. ನಿಮ್ಮ ಮಾತುಗಳನ್ನು ಗಮನಿಸಿ. ವಿಧಾನಸಭೆಯಲ್ಲಿ ಯಾವ ಹಾಸ್ಯ ಚಟಾಕಿ ಹಾರಿಸಲು ಯತ್ನಿಸುತ್ತಿದ್ದೀರಿ? ನಿಮ್ಮನ್ನು ಆಯ್ಕೆ ಮಾಡಿದವರು ಯಾರು? ನಿಮ್ಮನ್ನು ಆಯ್ಕೆ ಮಾಡಿದ ಜನರಿಗೆ ನಾವು ಹೇಳುತ್ತೇವೆ, ನೀವು ಮತ್ತೆ ಆಯ್ಕೆಯಾದರೆ ಅದು ವ್ಯವಸ್ಥೆಗೆ ಅಗೌರವವಾಗುತ್ತದೆ. ಖಂಡ್ರೆ ಅವರೇ ಕುಳಿತುಕೊಳ್ಳಿ. ಇದೇನಾ ಹಿರಿಯರಿಗೆ ಕೊಡುವ ಗೌರವ? ಈ ಸದನದಲ್ಲಿ ನಡೆದುಕೊಳ್ಳುವ ರೀತಿ ಇದೇನಾ' ಎಂದು ಪ್ರಶ್ನಿಸಿದರು.