ಮಧ್ಯರಾತ್ರಿಯಾದರೂ ಮಲಗದೆ ಕಾಶಿಯಲ್ಲಿ ಮೋದಿ ಸಂಚಾರ, ಅಭಿವೃದ್ಧಿ ಕಾರ್ಯಗಳ ಪರಿಶೀಲನೆ
ವಾರಾಣಸಿ, ಡಿ.14-ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸೋಮವಾರ ಮಧ್ಯರಾತ್ರಿಯವರೆಗೆ ಸಭೆ ನಡೆಸಿದರು. ಮತ್ತು ಇಡೀ ದಿನ ಕ್ರಿಯಾಶೀಲವಾಗಿದ್ದ ಮೋದಿ ಉತ್ತರ ಪ್ರದೇಶದ ತಮ್ಮ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ತಡರಾತ್ರಿ ಪರ್ಯಟನೆ ನಡೆಸಿದರು.
ಕಳೆದ ರಾತ್ರಿ ಮೋದಿ ಅವರು ಪೋಸ್ಟ್ ಮಾಡಿದ ಸರಣಿ ಟ್ವೀಟ್‍ಗಳು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆಯಲ್ಲಿ ಅವರು ನಗರ ಸಂಚಾರ ನಡೆಸಿದ ಚಿತ್ರಣ ನೀಡುತ್ತವೆ. ಕಾಶಿಯಲ್ಲಿನ ಪ್ರಮುಖ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದ ಮೋದಿ ಈ ಪವಿತ್ರ ನಗರದಲ್ಲಿ ಸಾಧ್ಯವಿರುವ ಅತ್ಯುತ್ತಮ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂದರು.
ಬನಾರಸ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಪ್ರಧಾನಿ ನಾವು ರೈಲು ಸಂಪರ್ಕವನ್ನು ಹೆಚ್ಚಿಸಲು ಕಾರ್ಯ ನಿರ್ವಹಿಸುತ್ತಿದ್ದೇವೆ ಮತ್ತು ಸ್ವಚ್ಛ,ಆಧುನಿಕ ಹಾಗೂ ಪ್ರಯಾಣಿಕ ಸ್ನೇಹಿ ರೈಲು ನಿಲ್ದಾಣಗಳಿರುವುದನ್ನು ಖಚಿತಪಡಿಸಬೇಕು ಎಂದು ತಿಳಿಸಿದರು.
ಬಿಜೆಪಿಯು ವಾರಾಣಸಿ ಕಾರ್ಯಕ್ರಮಗಳಿಂದ ತನ್ನ ಐಕಮತ್ಯವನ್ನೂ ಪ್ರದರ್ಶಿಸಿದೆ. ದೇಶದಾದ್ಯಂತದಿಂದ ಪಕ್ಷದ ಮುಖ್ಯಮಂತ್ರಿಗಳು ದೇವಾಲಯ ಪಟ್ಟಣಕ್ಕೆ ತಲುಪಿ ವಿಜೃಂಭಣೆಯ ಸಮಾರಂಭಗಳಲ್ಲಿ ಪಾಲ್ಗೊಂಡರು. ಅವರೊಂದಿಗೆ ಪ್ರಧಾನಿ ಪರಾಮರ್ಶನಾ ಸಬೆಗಳನ್ನೂ ನಡೆಸಿದರು.
ತಮ್ಮ ವಾರಾಣಸಿ ಭೇಟಿಯ 2ನೇ ದಿನವಾದ ಇಂದು ಪ್ರಧಾನಿಯವರು ವಾರಾಣಸಿಯ ಹೊರವಲಯದಲ್ಲಿರುವ ಪ್ರಸಿದ್ಧ ದೇವಾಲಯ ಸಮುಚ್ಚಯದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಬಳಿಕ ದೆಹಲಿಗೆ ಹಿಂದಿರುಗುವರು.