ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನ ಎಳೆದೊಯ್ದ ಪ್ರಕರಣ : ಫೆ.3ರವರೆಗೆ 'ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ'
ಬೆಂಗಳೂರು : ನಗರದಲ್ಲಿ ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಕೇಸ್ ಸಂಬಂಧಿಸಿ, ಫೆ.3ರವರೆಗೆ ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲು, 9ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಪ್ರಕರಣ ಸಂಬಂಧ ಜೈಲುಪಾಲಾದ ದರ್ಶನ್, ಸೃಜನ್, ವಿನಯ್, ಯಶವಂತ್, ಪ್ರಿಯಾಂಕ್ ಆರೋಪಿಗಳನ್ನು ಜ್ಞಾನಭಾರತಿ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ದರ್ಶನ್, ಸೃಜನ್, ವಿನಯ್, ಯಶವಂತ್, ವಿರುದ್ಧ ಐಪಿಸಿ ಸೆ. 354ರಡಿ ಕೇಸ್ ದಾಖಲಿಸಲಾಗಿದೆ. ಪ್ರಿಯಾಂಕ್ ವಿರುದ್ಧ ಐಪಿಸಿಸೆಕ್ಷನ್ 307ರಡಿ ಪ್ರಕರಣ ದಾಖಲಿಸಲಾಗಿದೆ.
ಘಟನೆ ಹಿನ್ನೆಲೆ:
ಶುಕ್ರವಾರ ಬೆಳಗ್ಗೆ 10.30 ಗಂಟೆಗೆ ಮಹಿಳೆಯೊಬ್ಬಳು ನೆಕ್ಸನ್ ಕಾರನ್ನು ಓಡಿಸುತ್ತಿದ್ದು, ರೆಡ್ ಸಿಗ್ನಲ್ ಇದ್ದರೂ ಕಾರನ್ನು ತಂದು ಅಡ್ಡ ನಿಲ್ಲಿಸಿದ್ದಳು. ಈ ವೇಳೆ ಸಿಗ್ನಲ್ ಇರುವುದು ಕಾಣಿಸಲ್ವಾ ಎಂದು ಬೈಕ್ ಸವಾರ ಕೇಳಿದ್ದಕ್ಕೆ ಆಕೆ ಮಧ್ಯದ ಬೆರಳು ತೋರಿಸಿ ಎಸ್ಕೇಪ್ ಆಗುತ್ತಿದ್ದಳು. ಈ ವೇಳೆ ಕಾರಿನ ಬಾನೆಟ್ ಮೇಲೆ ಹತ್ತಿ ಬೈಕ್ ಸವಾರ ಕಾರು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಆದರೆ ಮಹಿಳೆ ಮಾತ್ರ ಕಾರು ನಿಲ್ಲಿಸದೇ, ಮಂಗಳೂರು ಕಾಲೇಜಿನಿಂದ ಎರಡು ಕಿಲೋಮೀಟರ್ ಕಾರನ್ನು ವೇಗವಾಗಿ ಓಡಿಸಿದ್ದಾಳೆ. ಬೈಕ್ ಸವಾರನ ಪರದಾಟ ನೋಡಿ ಸ್ಥಳೀಯರು ಕಾರನ್ನು ಹಿಂಬಾಲಿಸಿ ತಡೆದಿದ್ದಾರೆ. ಬಳಿಕ ಕಾರು ಜಖಂ ಮಾಡಿ, ಜ್ಞಾನಭಾರತಿ ಪೊಲೀಸ್ ಠಾಣೆಗೆ ಸ್ಥಳೀಯರು ಕಾರು ತಂದಿದ್ದಾರೆ. ಸದ್ಯ ಎರಡೂ ಕಡೆಯವರನ್ನು ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸುತ್ತಿದ್ದಾರೆ.