ಪರಿಷತ್ ಚುನಾವಣೆ: ಗುರು ಎಸ್.ಎಂ. ಕೃಷ್ಣ ಆಪ್ತನಿಗೆ ಕಾಂಗ್ರೆಸ್ ಟಿಕೆಟ್ ಖಚಿತಪಡಿಸಿದ ಡಿಕೆಶಿ
ಮಂಡ್ಯ, ನವೆಂಬರ್ 19: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಗುರು ಶಿಷ್ಯರ ಸಂಬಂಧ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಪಕ್ಷಗಳು ಬದಲಾದರೂ ನಿಷ್ಟೆ ಮಾತ್ರ ಹಾಗೇ ಇದೆ. ಎಸ್.ಎಂ. ಕೃಷ್ಣ ಸಿಎಂ ಆಗಿದ್ದಾಗ ಡಿ.ಕೆ. ಶಿವಕುಮಾರ್ ಇನ್ನೂ ಯುವಕರಾಗಿದ್ದರು.
ಮಾಜಿ ಸಿಎಂ ಎಸ್.ಎಂ. ಕೃಷ್ಣ ಸದ್ಯ ಬಿಜೆಪಿಯಲ್ಲಿದ್ದರೂ, ಕಾಂಗ್ರೆಸ್‌ನಲ್ಲಿ ಅವರ ಮಾತಿಗೆ ಈಗಲೂ ಬೆಲೆ ಕೊಡುತ್ತಾರೆ. ಸ್ವತಃ ಕೆಪಿಸಿಸಿ ಅಧ್ಯಕ್ಷರು ತಮ್ಮ ಗುರುವಿನ ಒಂದೇ ಒಂದು ಫೋನ್ ಕರೆಗೆ ಮಂಡ್ಯದ ವಿಧಾನ ಪರಿಷತ್ ಕಾಂಗ್ರೆಸ್ ಟಿಕೆಟ್ ಅನ್ನು ಅವರು ಸೂಚಿಸಿದವರಿಗೆ ನೀಡಿದ್ದಾರೆ.
ಕಾಂಗ್ರೆಸ್‌ನಿಂದ ಮಂಡ್ಯ ವಿಧಾನ ಪರಿಷತ್ ಸ್ಥಾನಕ್ಕೆ ಪರಿಷತ್ತಿನ ಮಾಜಿ ಸದಸ್ಯರೂ ಆಗಿರುವ ರಾಮಕೃಷ್ಣ ಹೆಸರು ಬಹುತೇಕ ಅಂತಿಮವಾಗಿತ್ತು. ಅಧಿಕೃತ ಘೋಷಣೆ ಅಷ್ಟೇ ಬಾಕಿ ಇತ್ತು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ದಿನೇಶ್ ಗೂಳಿಗೌಡ ಅವರಿಗೆ ಮಂಡ್ಯದ ಪರಿಷತ್ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ.
ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಅವರಿಗೆ ದಿನೇಶ್ ಗೂಳಿಗೌಡ ವಿಶೇಷಾಧಿಕಾರಿ ಆಗಿದ್ದರು. ಚುನಾವಣೆ ಘೋಷಣೆ ಆಗುತ್ತಿದ್ದಂತೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಕೆಲ ನಿಷ್ಟಾವಂತರ ಸಿಟ್ಟಿಗೆ ಕಾರಣವಾಗಿದೆ. ಈ ಸಂಬಂಧ ವರಿಷ್ಠರಿಗೆ ದೂರು ಕೊಡುವ ಚಿಂತನೆಯೂ ನಡೆದಿದೆ ಎಂದು ಹೇಳಲಾಗುತ್ತಿದೆ.
ಸಚಿವ ಎಸ್. ಟಿ. ಸೋಮಶೇಖರ್ ಮತ್ತು ಅವರ ಬಳಗದ ಜೊತೆ ದಿನೇಶ್ ಗುರುತಿಸಿಕೊಂಡವರು. ಮೈತ್ರಿ ಸರ್ಕಾರ ಪತನಗೊಳ್ಳಲು ಅವರ ಸಚಿವ ಸೋಮಶೇಖರ್ ಪಾತ್ರ ಇದೆ. ಹೀಗಾಗಿ ಸಚಿವರ ವಿಶೇಷಾಧಿಕಾರಿ ಆಗಿರುವ ದಿನೇಶ್ ಗೂಳಿಗೌಡ ಅವರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ದಿನೇಶ್ ಗೂಳಿಗೌಡಗೆ ಟಿಕೆಟ್ ಸಿಗಲು ಏನು ಕಾರಣ?
ದಿನೇಶ್ ಗೂಳಿಗೌಡ ಕಾಂಗ್ರೆಸ್ಸಿನ ಮಾಧ್ಯಮ ವಿಭಾಗದಲ್ಲಿ ಹಲವು ವರ್ಷ ಕಾರ್ಯನಿರ್ವಹಿಸಿದ್ದಾರೆ. ಮಾಜಿ ಸಿಎಂ ಎಸ್. ಎಂ. ಕೃಷ್ಣರಿಗೆ ಆಪ್ತರಾಗಿದ್ದಾರೆ. ತಮಗೆ ಕಾಂಗ್ರೆಸ್‌ನಿಂದ ಪರಿಷತ್ ಟಿಕೆಟ್ ಕೊಡಿಸಿ ಎಂದು ಎಸ್ಎಂಕೆಗೆ ದಿನೇಶ್ ಮನವಿ ಮಾಡಿದ್ದರಂತೆ. ಆಗ ಎಸ್.ಎಂ. ಕೃಷ್ಣ ತಮ್ಮ ಶಿಷ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಒಂದು ಫೋನ್ ಕರೆ ಮಾಡಿ ದಿನೇಶ್ ಗೂಳಿಗೌಡಗೆ ಪರಿಷತ್ ಟಿಕೆಟ್ ಕೊಡಿಸುವಂತೆ ಹೇಳಿದರು ಎಂದು ತಿಳಿದುಬಂದಿದೆ.
ತಮ್ಮ ಗುರುವಿನ ಮಾತನ್ನು ತಳ್ಳಿಹಾಕಲಾಗದ ಡಿ.ಕೆ. ಶಿವಕುಮಾರ್ ಕೂಡಲೇ ದಿನೇಶ್ಗೆ ಟಿಕೆಟ್ ನೀಡುವ ಮುನ್ನ ಮಾಡಬೇಕಾದ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಮಂಡ್ಯದ ಜಿಲ್ಲಾ ಕಾಂಗ್ರೆಸ್ ಘಟಕವನ್ನು ಸಂಪರ್ಕಿಸಿ ಈ ವಿಚಾರ ಚರ್ಚಿಸಿ ಒಪ್ಪಿಸಿದ್ದಾರೆ. ಮಂಡ್ಯ ನಾಯಕರಾದ ಚಲುವರಾಯಸ್ವಾಮಿ ಮತ್ತು ನರೇಂದ್ರಸ್ವಾಮಿಗೆ ಕರೆ ಮಾಡಿ ತಿಳಿಸಿ, ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಇದಕ್ಕೆ ಒಪ್ಪಿಸುವಂತೆ ಕೇಳಿಕೊಂಡಿದ್ದಾರೆ. ಅದರಂತೆ ಚಲುವರಾಯಸ್ವಾಮಿ ಅವರೂ ಸಹ ಸಿದ್ದರಾಮಯ್ಯ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಗೆಯೇ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಆಗುವ ನಿರೀಕ್ಷೆಯಲ್ಲಿದ್ದ ರಾಮಕೃಷ್ಣರಿಗೂ ಡಿಕೆಶಿ ಕರೆ ಮಾಡಿ ಮಾತನಾಡಿದ್ದಾರೆ. ದಿನೇಶ್ ಗೂಳಿಗೌಡಗೆ ಟಿಕೆಟ್ ಕೊಡಲಾಗುವುದು ಎಂದು ಹೇಳಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ದಿನೇಶ್ ಗೂಳಿಗೌಡಗೆ ಕಾಂಗ್ರೆಸ್ ಟಿಕೆಟ್ ಖಚಿತವಾಗಿದ್ದು, ಪಕ್ಷದ ವರಿಷ್ಠರ ಸೂಚನೆ ಮೇರೆಗೆ ದಿನೇಶ್ ಗೂಳಿಗೌಡ ಮಂಡ್ಯ ಜಿಲ್ಲೆಯ ಪ್ರವಾಸ ಮಾಡುತ್ತಿದ್ದಾರೆ.
ಮಂಡ್ಯ ವಿಧಾನ ಪರಿಷತ್‌ಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಖಚಿತ ಎನಿಸುತ್ತಿದ್ದಂತೆಯೇ ದಿನೇಶ್ ಗೂಳಿಗೌಡ ಸಹಕಾರ ಇಲಾಖೆ ಸಚಿವರ ವಿಶೇಷಾಧಿಕಾರಿ ಹುದ್ದೆಗೆ ರಾಜೀನಾಮೆ ಕೂಡ ನೀಡಿದ್ದಾರೆ.
20 ಜಿಲ್ಲೆಗಳಿಂದ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ನವೆಂಬರ್ 23ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನ.26 ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಇದೆ. ಡಿ.10ಕ್ಕೆ ಚುನಾವಣೆ ನಡೆದರೆ ಡಿಸೆಂಬರ್ 14ಕ್ಕೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.