ಈ ದೇವಸ್ಥಾನ ನೆಸ್ಲೆ, ವಿಪ್ರೋ ಕಂಪನಿಗಳಿಗಿಂತಲೂ ಶ್ರೀಮಂತ

ಬೆಂಗಳೂರು: ತಿರುಮಲ ತಿಮ್ಮಪ್ಪ ಭಾರತದ ಅತ್ಯಂತ ಶ್ರೀಮಂತ ದೇವರು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ತಿರುಪತಿ ದೇವಸ್ಥಾನದ ಮಂಡಳಿ ಸ್ಥಾಪನೆ ಆದಾಗಿನಿಂದ (1933) ಇಲ್ಲಿ ವರೆಗೂ ಆಸ್ತಿ ಘೋಷಣೆ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಮಂಡಳಿ ದೇವಸ್ಥಾನದ ಆಸ್ತಿ ಘೋಷಣೆ ಮಾಡಿದ್ದು ಎಲ್ಲರ ಹುಬ್ಬೇರಿಸಿದೆ.
ಸದ್ಯಕ್ಕೆ ತಿಮ್ಮಪ್ಪನ ಬಳಿ ವಿವಿಧ ಬ್ಯಾಂಕ್ಗಳಲ್ಲಿ ಠೇವಣಿ ಇಡಲಾದ 10.25 ಟನ್ ಚಿನ್ನಇದೆ. 2.5 ಟನ್ ಚಿನ್ನಾಭರಣಗಳಿದ್ದು 16 ಸಾವಿರ ಕೋಟಿ ರುಪಾಯಿ ಬ್ಯಾಂಕ್ನಲ್ಲಿ ಜಮೆ ಇದೆ. ಇದಷ್ಟೇ ಅಲ್ಲದೇ ದೇಶಾದ್ಯಂತ 960 ಆಸ್ತಿಗಳಿವೆ. ಈ ಎಲ್ಲಾ ಆಸ್ತಿಯ ಒಟ್ಟು ಮೊತ್ತ 2.5 ಲಕ್ಷ ಕೋಟಿಗೂ ಮೀರಿದ್ದು!
ಸದ್ಯಕ್ಕೆ ಇಷ್ಟು ಆಸ್ತಿ ನೆಸ್ಲೆ, ವಿಪ್ರೊ, ಮುಂತಾದ 'ಶ್ರೀಮಂತ' ಎನಿಸಿಕೊಳ್ಳುವ ಕಂಪೆನಿಗಳಲ್ಲೂ ಇಲ್ಲ! ಭಾರತ ಸರ್ಕಾರದ ಅಧೀನದಲ್ಲಿರುವ (ONGC) Oil and Natural Gas Corporationನ ಆಸ್ತಿ ಕೂಡ ತಿಮ್ಮಪ್ಪನ ಆಸ್ತಿ ಎದುರು ಕಮ್ಮಿಯೇ. ಭಾರತದಲ್ಲಿ ಸುಮಾರು 25 ಕಂಪೆನಿಗಳು ಮಾತ್ರವೇ ತಿರುಪತಿ ಟ್ರಸ್ಟ್ಗಿಂತ ಹೆಚ್ಚು ಆಸ್ತಿ ಹೊಂದಿರುವುದು. (ಏಜೆನ್ಸೀಸ್)