ಇಂದಿನಿಂದ ಐಪಿಎಲ್: 'ತೋಳ್ಬಲ' ಮೆರೆಯುವ ಹುಮ್ಮಸ್ಸಿನಲ್ಲಿ ಮಹಿ

ಇಂದಿನಿಂದ ಐಪಿಎಲ್: 'ತೋಳ್ಬಲ' ಮೆರೆಯುವ ಹುಮ್ಮಸ್ಸಿನಲ್ಲಿ ಮಹಿ

ಹಮದಾಬಾದ್/ಬೆಂಗಳೂರು: ಸತತ ಹದಿನಾರನೇ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಮಹೇಂದ್ರಸಿಂಗ್ ಧೋನಿ ತಮ್ಮ 'ಕಟ್ಟುಮಸ್ತಾದ ತೋಳ್ಬಲ' ತೋರಿಸಲು ಸಿದ್ಧರಾಗಿದ್ದಾರೆ.

ಹೌದು. ಪ್ರತಿಯೊಂದು ಐಪಿಎಲ್‌ನಲ್ಲಿಯೂ ಹೊಸದೊಂದು ಕೇಶವಿನ್ಯಾಸ, ಗಡ್ಡದ ವಿನ್ಯಾಸಗಳೊಂದಿಗೆ ಕಣಕ್ಕಿಳಿಯುತ್ತಿದ್ದ ಧೋನಿ ಈ ಸಲ ತಮ್ಮ ಬೈಸೆಪ್ಸ್‌ (ಕಟ್ಟುಮಸ್ತಾದ ತೋಳುಗಳು) ನೊಂದಿಗೆ ಗಮನ ಸೆಳೆಯಲಿದ್ದಾರೆ.

2020ರಲ್ಲಿ ಕೋವಿಡ್‌ ಸೃಷ್ಟಿಸಿದ್ದ ಬಿಕ್ಕಟ್ಟಿನಿಂದಾಗಿ ಎಲ್ಲ ಆಟಗಾರರು ಹೆಚ್ಚು ಸಮಯ ಮನೆಯಲ್ಲಿ ಕಳೆದಿದ್ದು. ಆಗ ಅವರ ದೈಹಿಕ ಫಿಟ್‌ನೆಸ್‌ನಲ್ಲಿ ಕೆಲವು ಬದಲಾವಣೆಗಳು ಕಂಡಿದ್ದವು. ಆ ವರ್ಷ ದುಬೈನಲ್ಲಿ ನಡೆದ ಐಪಿಎಲ್‌ನಲ್ಲಿ ಧೋನಿ ಅವರ ತೋಳುಗಳು ಸ್ಥೂಲವಾಗಿದ್ದು ಮತ್ತು ಅವರ ದೇಹತೂಕ ಏರಿದ್ದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಓಡಾಡಿದ್ದವು.

ಆದರೆ ಕಳೆದ ಮೂರು ವರ್ಷಗಳಲ್ಲಿ ಅವರು ವ್ಯಾಯಾಮ ಮತ್ತು ಪೌಷ್ಟಿಕ ಆಹಾರ ಸೇವನೆಯ ಮೂಲಕ ಕಟ್ಟುಮಸ್ತು ಮಾಡಿಕೊಂಡಿದ್ದಾರೆ. 41ರ ವಯಸ್ಸಿನಲ್ಲಿಯೂ ಅವರ ಫಿಟ್‌ನೆಸ್‌ ಪ್ರೇಮ ಮುಂದುವರೆದಿದೆ. ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ನಾಲ್ಕು ಬಾರಿ ಚಾಂಪಿಯನ್ ಆಗಿದೆ. ಇದೀಗ ಚೆನ್ನೈ ಬಳಗವು ಶುಕ್ರವಾರ ಆರಂಭವಾಗಲಿರುವ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ 'ಹಾಲಿ ಚಾಂಪಿಯನ್' ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್‌ ವಿರುದ್ಧ ಕಣಕ್ಕಿಳಿಯಲಿದೆ. ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಧೋನಿ ತಮ್ಮ ಶಾಂತಚಿತ್ತದ ನಾಯಕತ್ವ ಮತ್ತು ವಿಕೆಟ್‌ಕೀಪಿಂಗ್‌ಗೆ ಹೆಸರಾದವರು. ಅವರು ಭಾರತ ತಂಡದ ನಾಯಕರಾಗಿದ್ದ ಸಂದರ್ಭದಲ್ಲಿ ಪದಾರ್ಪಣೆ ಮಾಡಿದ್ದ ಹಾರ್ದಿಕ್ ಐಪಿಎಲ್‌ನಲ್ಲಿ 'ರೆಡ್ ಹಾಟ್ ಕ್ಯಾಪ್ಟನ್' ಆಗಿ ಗುರುತಿಸಿಕೊಂಡಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಬಳಗವು ಹೋದ ವರ್ಷ ಚೊಚ್ಚಲ ಐಪಿಎಲ್ ಆಡಿತ್ತು. ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆದ್ದು ಚಾಂಪಿಯನ್ ಕೂಡ ಆಗಿತ್ತು.

ಈ ಬಾರಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಅವರು ಗುಜರಾತ್ ತಂಡದಲ್ಲಿ ಆಡುತ್ತಿರುವುದು ಹಾರ್ದಿಕ್ ಆತ್ಮವಿಶ್ವಾಸ ಹೆಚ್ಚಿಸಿದೆ.

ಚೆನ್ನೈ ಬಳಗದಲ್ಲಿ ಬೆನ್ ಸ್ಟೋಕ್ಸ್‌, ಅನುಭವಿ ಅಜಿಂಕ್ಯ ರಹಾನೆ ಆಡಲಿದ್ದಾರೆ. ಉಭಯ ತಂಡಗಳಲ್ಲಿಯೂ ಉತ್ತಮ ಆಲ್‌ರೌಂಡರ್‌ಗಳಿರುವುದರಿಂದ ರೋಚಕ ಹಣಾಹಣಿ ನಡೆಯುವ ನಿರೀಕ್ಷೆ ಇದೆ.

ಧೋನಿ ಅವರ ವೃತ್ತಿಜೀವನದ ಕೊನೆಯ ಐಪಿಎಲ್ ಟೂರ್ನಿ ಇದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಧೋನಿ ಇನ್ನೂ ತುಟಿಬಿಚ್ಚಿಲ್ಲ. ಸದ್ಯಕ್ಕಂತೂ ತಮ್ಮ ತಂಡಕ್ಕೆ ಐದನೇ ಟ್ರೋಫಿ ಜಯಿಸಿಕೊಡುವತ್ತ ಚಿತ್ತ ನೆಟ್ಟಿದ್ದಾರೆ.

ತಂಡಗಳು

ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರಸಿಂಗ್ ಧೋನಿ (ನಾಯಕ/ವಿಕೆಟ್‌ಕೀಪರ್), ಋತುರಾಜ್ ಗಾಯಕವಾಡ್, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಮೋಯಿನ್ ಅಲಿ, ಬೆನ್ ಸ್ಟೋಕ್ಸ್, ಶಿವಂ ದುಬೆ, ರವೀಂದ್ರ ಜಡೇಜ, ಡ್ವೇನ್ ಪ್ರಿಟೊರಿಯಸ್, ಮಿಚೆಲ್ ಸ್ಯಾಂಟನರ್, ಡೆವೊನ್ ಕಾನ್ವೆ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ರಾಜವರ್ಧನ್ ಹಂಗರೇಕರ್, ಸಿಸಾಂದಾ ಮಗಾಲ, ಅಜಯ್ ಮಂಡ್, ಮುಖೇಶ್ ಚೌಧರಿ, ಮಹೀಷ ತೀಕ್ಷಣ, ಪ್ರಶಾಂತ್ ಸೋಳಂಕಿ, ಸಿಮರಜೀತ್ ಸಿಂಗ್.

ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಕೇನ್ ವಿಲಿಯಮ್ಸನ್, ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಶಿವಂ ಮಾವಿ, ಶ್ರೀಕರ್ ಭರತ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ (ಮೂವರು ವಿಕೆಟ್‌ಕೀಪರ್), ಅಲ್ಜರಿ ಜೋಸೆಫ್, ಜೋಶುವಾ ಲಿಟಲ್, ಮೊಹಮ್ಮದ್ ಶಮಿ, ನೂರ್ ಅಹಮದ್, ರವಿಶ್ರೀನಿವಸಾನ್ ಸಾಯಿಕಿಶೋರ್, ಪ್ರದೀಪ್ ಸಂಗ್ವಾನ್, ಮೋಹಿತ್ ಶರ್ಮಾ, ಒಡಿಯನ್ ಸ್ಮಿತ್, ಜಯಂತ್ ಯಾದವ್, ಯಶ್ ದಯಾಳ್.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೊ ಸಿನೆಮಾ ಆಯಪ್

ರೋಚಕತೆ ತುಂಬುವ ಹೊಸ ನಿಯಮಗಳು

ಬೆಂಗಳೂರು: ಈ ಬಾರಿಯ ಐಪಿಎಲ್‌ನಲ್ಲಿ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಆಟದ ರೋಚಕತೆಯನ್ನು ಇನ್ನಷ್ಟು ಹೆಚ್ಚಿಸಲಿದೆ. 'ಇಂಪ್ಯಾಕ್ಟ್‌ ಪ್ಲೇಯರ್‌' ಬಳಕೆ, ಟಾಸ್‌ ಬಳಿಕ ಅಂತಿಮ ಇಲೆವೆನ್‌ ಆಯ್ಕೆ, ವೈಡ್‌ ಮತ್ತು ನೋಬಾಲ್‌ಗೂ ಡಿಆರ್‌ಎಸ್‌ ಪಡೆದುಕೊಳ್ಳುವ ಅವಕಾಶವನ್ನು ಈ ಬಾರಿ ನೀಡಲಾಗಿದೆ.

'ಇಂಪ್ಯಾಕ್ಟ್‌ ಪ್ಲೇಯರ್‌' ನಿಯಮದ ಪ್ರಕಾರ ತಂಡಗಳು ಅಂತಿಮ ಇಲೆವೆನ್‌ ಜತೆಗೆ, ಐವರು ಬದಲಿ ಆಟಗಾರರನ್ನು ಕೂಡಾ ಹೆಸರಿಸಬೇಕು. ಅದರಲ್ಲಿ ಒಬ್ಬ ಆಟಗಾರ (ಇಂಪ್ಯಾಕ್ಟ್ ಪ್ಲೇಯರ್‌) ಪಂದ್ಯದ ಯಾವುದೇ ಹಂತದಲ್ಲಿ ಆರಂಭಿಕ ಇಲೆವೆನ್‌ನ ಆಟಗಾರರನ್ನು ಬದಲಾಯಿಸಿ ಕಣಕ್ಕಿಳಿಯಬಹುದು. ಇನಿಂಗ್ಸ್‌ನ 14ನೇ ಓವರ್‌ನ ಮುಕ್ತಾಯಕ್ಕೆ ಮುನ್ನ ಈ ಬದಲಾವಣೆ ಮಾಡಬೇಕು.

ಬ್ಯಾಟ್‌ ಮಾಡುವ ತಂಡವು ಔಟಾದ ಅಥವಾ ನಿವೃತ್ತಿಗೊಂಡು ಪೆವಿಲಿಯನ್‌ ಮರಳಿದ ಬ್ಯಾಟರ್‌ಗೆ ಬದಲಿಯಾಗಿ ಇಂಪ್ಯಾಕ್ಟ್‌ ಪ್ಲೇಯರ್‌ಅನ್ನು ಕಣಕ್ಕಿಳಿಸಿದರೂ 11 ಆಟಗಾರರಿಗಷ್ಟೇ ಬ್ಯಾಟ್‌ ಮಾಡಲು ಅವಕಾಶವಿದೆ.

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಈ ನಿಯಮವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು.

l ಟಾಸ್‌ ಬಳಿಕ ಅಂತಿಮ ಇಲೆವೆನ್‌ ಆಯ್ಕೆ

ಟಾಸ್‌ ಆದ ಬಳಿಕ ಅಂತಿಮ ಇಲೆವೆನ್‌ ಆಯ್ಕೆ ಮಾಡುವ ಅವಕಾಶವನ್ನು ತಂಡಗಳಿಗೆ ನೀಡಲಾಗಿದೆ. 'ಪ್ರತಿ ತಂಡದ ನಾಯಕರು ಆಡುವ 11 ಮಂದಿ ಆಟಗಾರರು ಮತ್ತು ಐವರು ಸಬ್‌ಸ್ಟಿಟ್ಯೂಟ್‌ ಫೀಲ್ಡರ್‌ಗಳ ಹೆಸರನ್ನು ಟಾಸ್‌ ಬಳಿಕ ಮ್ಯಾಚ್‌ ರೆಫರಿಗೆ ನೀಡಬಹುದು' ಎಂದು ಹೊಸ ನಿಯಮ ಹೇಳಿದೆ.

ಟಾಸ್‌ ಬಳಿಕ ಅಂತಿಮ ಹನ್ನೊಂದರ ಬಳಗದಲ್ಲಿ ಏನಾದರೂ ಬದಲಾವಣೆ ಬಯಸಿದರೆ, ಹೊಸ ನಿಯಮವು ಅದಕ್ಕೆ ಅವಕಾಶ ಕಲ್ಪಿಸಿದೆ. ಮೊದಲು ಬ್ಯಾಟ್‌ ಮಾಡಬೇಕೇ ಅಥವಾ ಬೌಲಿಂಗ್‌ ಮಾಡಬೇಕೇ ಎಂಬುದರ ಆಧಾರದಲ್ಲಿ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡುವ ಅವಕಾಶ ತಂಡಗಳಿಗೆ ಲಭಿಸಿದೆ.

l ವೈಡ್‌, ನೋಬಾಲ್‌ಗೂ ಡಿಆರ್‌ಎಸ್‌

ವೈಡ್‌ ಮತ್ತು ನೋಬಾಲ್‌ಗೂ ಅಂಪೈರ್ ತೀರ್ಪು ಮರುಪರಿಶೀಲನೆ (ಡಿಆರ್‌ಎಸ್‌) ಪಡೆದುಕೊಳ್ಳುವ ಹೊಸ ನಿಯಮವನ್ನು ಅಳವಡಿಸಲಾಗಿದೆ. ಈಚೆಗೆ ನಡೆದ ಡಬ್ಲ್ಯುಪಿಎಲ್‌ನಲ್ಲಿ ಈ ನಿಯಮ ಜಾರಿಯಾಗಿತ್ತು.

ವೈಡ್‌ ಮತ್ತು ನೋಬಾಲ್‌ಗೆ ಸಂಬಂಧಿಸಿದಂತೆ ಅಂಪೈರ್‌ ನೀಡುವ ತೀರ್ಪಿಗೆ ಅತೃಪ್ತಿಯಿದ್ದರೆ ಆಟಗಾರ್ತಿಯರಿಗೆ ಡಿಆರ್‌ಎಸ್‌ ಮೊರೆ ಹೋಗಬಹುದು.