ಆಸಿಸ್​ ವಿರುದ್ಧ ಏಕದಿನ ಸರಣಿ ಸೋಲು: ರೋಹಿತ್​ರನ್ನು ತರಾಟೆಗೆ ತೆಗೆದುಕೊಂಡ ಸುನೀಲ್​ ಗವಾಸ್ಕರ್​

ಆಸಿಸ್​ ವಿರುದ್ಧ ಏಕದಿನ ಸರಣಿ ಸೋಲು: ರೋಹಿತ್​ರನ್ನು ತರಾಟೆಗೆ ತೆಗೆದುಕೊಂಡ ಸುನೀಲ್​ ಗವಾಸ್ಕರ್​

ವದೆಹಲಿ: ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-2 ಅಂತರದಿಂದ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲುಂಡ ಬೆನ್ನಲ್ಲೇ ಟೀಮ್​ ಇಂಡಿಯಾದ ಮಾಜಿ ದಿಗ್ಗಜ ಆಟಗಾರ ಸುನೀಲ್​ ಗವಾಸ್ಕರ್​ ಅವರು ನಾಯಕ ರೋಹಿತ್​ ಶರ್ಮಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿಂದ ಪಂದ್ಯದಿಂದ ಹೊರಗುಳಿದಿದ್ದಕ್ಕೆ ರೋಹಿತ್​ ವಿರುದ್ಧ ಗವಾಸ್ಕರ್​ ಟೀಕಾ ಪ್ರಹಾರ ನಡೆಸಿದ್ದಾರೆ. ಕೌಟುಂಬಿಕ ಬದ್ಧತೆಯನ್ನು ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ, ವಿಶ್ವಕಪ್ ಸಮಯದದಲ್ಲಿ ಹೊರಗಿಡಬೇಕು ಎಂದಿದ್ದಾರೆ. 2023ರ ಎಲ್ಲ ಏಕದಿನ ಪಂದ್ಯಗಳನ್ನು ತಪ್ಪಿಸದೇ ಆಡಬೇಕೆಂದು ಸಲಹೆ ನೀಡಿದ್ದಾರೆ.

ಆಸಿಸ್​ ವಿರುದ್ಧದ ಕೊನೆಯ ಎರಡು ಪಂದ್ಯಗಳಿಗೆ ಟೀಮ್​ ಇಂಡಿಯಾ ಆಟಗಾರರ ಪಟ್ಟಿಯನ್ನು ಪ್ರಕಟಿಸುವಾಗ ಮೊದಲ ಏಕದಿನ ಪಂದ್ಯದಿಂದ ರೋಹಿತ್​ ಶರ್ಮಾ ಹೊರಗುಳಿಯಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿತ್ತು. ರೋಹಿತ್​ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಅವರು ತಂಡದ ನಾಯಕರಾಗಲಿದ್ದಾರೆ ಎಂದು ತಿಳಿಸಿತ್ತು.

ಅವನು (ರೋಹಿತ್​ ಶರ್ಮ) ಪ್ರತಿ ಪಂದ್ಯವನ್ನು ಆಡಬೇಕೆಂದು ನಾನು ಭಾವಿಸುತ್ತೇನೆ. ಕೇವಲ ಒಂದು ಪಂದ್ಯಕ್ಕೆ ಇರುವ ನಾಯಕನನ್ನು ಹೊಂದಲು ನಿಮಗೆ ಸಾಧ್ಯವಿಲ್ಲ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಕೇವಲ ನಾಯಕ ಮಾತ್ರವಲ್ಲ ಯಾವುದೇ ಆಟಗಾರನಿಗೂ ಇದು ಅನ್ವಯವಾಗುತ್ತದೆ. ಇಲ್ಲಿ ಕುಟುಂಬದ ಬದ್ಧತೆ ಅನುಪಸ್ಥಿತಿಗೆ ಕಾರಣವೆಂದು ನನಗೆ ತಿಳಿದಿದೆ. ಆದ್ದರಿಂದ ಆತ ಕುಟುಂಬದೊಂದಿಗೆ ಇರಬೇಕಾಗಿತ್ತು. ಇದು ಅರ್ಥವಾಗುವಂಥದ್ದೇ ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.

ಮುಂದುವರಿದು ಮಾತನಾಡಿದ ಗವಾಸ್ಕರ್​ ಅವರು ವಿಶ್ವಕಪ್​ ಅಂತ ಬಂದಾಗ ಯಾವುದೇ ಕೌಟುಂಬಿಕ ಬದ್ಧತೆಯನ್ನು ಹೊಂದಿರಬಾರದು. ಎಲ್ಲವನ್ನು ಮೊದಲೇ ಪೂರ್ಣಗೊಳಿಸಬೇಕು. ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ, ಉಳಿದ ಯಾವುದೇ ಸಮಯದಲ್ಲಿ ಕೌಟುಂಬಿಕ ಬದ್ಧತೆಗೆ ಅವಕಾಶ ನೀಡಬಾರದು ಎಂದು ಗವಾಸ್ಕರ್​ ತಿಳಿಸಿದ್ದಾರೆ.

ರೋಹಿತ್, ಭಾರತಕ್ಕೆ ಆಸೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು 2-1 ರಿಂದ ಗೆಲ್ಲಿಸಿ ಕೊಟ್ಟರು. ಆದರೆ, ಏಕದಿನ ಸರಣಿಯಲ್ಲಿ 1-2 ಅಂತರದಿಂದ ಸೋತು ಸರಣಿ ಕೈಚೆಲ್ಲಿದರು. ಮುಂಬೈನಲ್ಲಿ ಐದು ವಿಕೆಟ್‌ಗಳ ಗೆಲುವಿನೊಂದಿಗೆ ಮೊದಲ ಏಕದಿನ ಸರಣಿ ಆರಂಭಿಸಿದ ಭಾರತ, ವೈಜಾಗ್‌ನಲ್ಲಿ 10 ವಿಕೆಟ್‌ಗಳ ಸೋಲಿನೊಂದಿಗೆ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದ ಸೋಲಿನೊಂದಿಗೆ ಸರಣಿಯನ್ನು ಕೈಚೆಲ್ಲಿತ್ತು. (ಏಜೆನ್ಸೀಸ್​)