'ಆರೋಗ್ಯ ಇಲಾಖೆ'ಯ 'NHM ಒಳಗುತ್ತಿಗೆ ನೌಕರ'ರಿಂದ ಸಿದ್ಧಲಿಂಗ ಸ್ವಾಮೀಜಿ ಭೇಟಿ, 'ಹುದ್ದೆ ಖಾಯಂ'ಗೆ ಸಿಎಂಗೆ ಸೂಚಿಸಲು ಮನವಿ

ತುಮಕೂರು: ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಳೆದ 12 ದಿನಗಳಿಂದ ರಾಜ್ಯ ಆರೋಗ್ಯ ಇಲಾಖೆಯ ಎನ್ ಹೆಚ್‌ಎಂ ಒಳಗುತ್ತಿಗೆ ನೌಕರರು ಹುದ್ದೆ ಖಾಯಂಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಹುದ್ದೆಯನ್ನು ಖಾಯಂಗೊಳಿಸುವಂತೆ ಸಿಎಂ ಬೊಮ್ಮಾಯಿ ಅವರಿಗೆ ಸೂಚಿಸುವಂತೆ ತುಮಕೂರಿನಲ್ಲಿ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಭೇಟಿಯಾಗಿ ಕೋರಿದ್ದಾರೆ.
ಗುರುವಾರ ಸಂಜೆ ರಾಜ್ಯ ಎನ್ ಹೆಚ್ ಎಂ ಒಳಗುತ್ತಿಗೆ ನೌಕರರ ಸಂಘದ ಅಧ್ಯಕ್ಷರು, ಸದಸ್ಯರು ಸಿದ್ಧಗಂಗ ಮಠಕ್ಕೆ ಭೇಟಿ ನೀಡಿದರು. ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯನ್ನು ಭೇಟಿಯಾಗಿ, ಮುಖ್ಯಮಂತ್ರಿಗಳಿಗೆ ನಮ್ಮ ಹುದ್ದೆಗಳನ್ನು ಖಾಯಂ ಮಾಡಲು ಸೂಚಿಸಬೇಕೆಂದು ಕೋರಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವಂತ ಸಿದ್ದಲಿಂಗ ಸ್ವಾಮೀಜಿಗಳು, ಸಿಎಂ ಜೊತೆಗೆ ಮಾತನಾಡುವದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ನಮಗೆ ಯಾಕೆ ವೇತನ ತಾರತಮ್ಯ? ನಮ್ಮನ್ನೂ ಖಾಯಂಗೊಳಿಸುವಂತೆ ಒತ್ತಾಯ
ಇನ್ನೂ ರಾಜ್ಯ ಆರೋಗ್ಯ ಇಲಾಖೆಯ ಎನ್ ಹೆಚ್‌ಎಂ ನೌಕರರು, ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿದೆ. ಸಿಲಿಂಡರ್ ಬೆಲೆ 1000 ರೂ ಗಡಿ ದಾಟಿದೆ. ಹಾಲು, ಹಣ್ಣು, ತರಕಾರಿ ಬೆಲೆ ಗಗನಕ್ಕೇರಿದೆ. ಹೀಗೆ ಇರುವಾಗ ಆರೋಗ್ಯ ಇಲಾಖೆ ಗುತ್ತಿಗೆ ನೌಕರರಿಗೆ ನೀಡುತ್ತಿರುವಂತ ವೇತನ ಯಾವುದಕ್ಕೆ ಸಾಕಾಗುತ್ತದೆ? ಮಕ್ಕಳ ಶಿಕ್ಷಣ, ಹೊಸ ಬಟ್ಟೆ, ಮನೆ ಕಟ್ಟೋದು, ಖರೀದಿಸೋದು ಕನಸಿನ ಮಾತಾಗಿದೆ. ದೂರದಿಂದ ಓಡಾಡುವಂತ ನೌಕರರಿಗೆ ಬಸ್ ಚಾರ್ಜ್ ಸೇರಿದಂತೆ ಇತರೆ ಖರ್ಚಿಗೂ ಸರ್ಕಾರ ನೀಡುತ್ತಿರುವಂತ ವೇತನ ಸಕಾಗುತ್ತಿಲ್ಲ. ಇದರಲ್ಲಿ ಜೀವನ ನಡೆಸೋದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರು 7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಮಾರ್ಚ್ 1ರಿಂದ ಮುಷ್ಕರಕ್ಕೆ ಕರೆ ನೀಡಿದ ಬೆನ್ನಲ್ಲೇ ಸದನದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್ ನಲ್ಲೇ ಆಯೋಗದಿಂದ ಮಧ್ಯಂತರ ವರದಿಯನ್ನು ಪಡೆದು ಜಾರಿಗೆ ತರೋದಾಗಿ ಘೋಷಿಸಿದ್ದಾರೆ. ಅದೇ ಎನ್ ಹೆಚ್‌ಎಂ ನೌಕರರು ಕಳೆದ 12 ದಿನಗಳಿಂದ ಫ್ರೀಡಂ ಪಾರ್ಕ್ ನಲ್ಲಿ ಹುದ್ದೆ ಖಾಯಂಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಸಚಿವರು ಸೇರಿದಂತೆ, ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ನೌಕರರ ಬೇಡಿಕೆ ಈಡೇರಿಸೋ ಬಗ್ಗೆ ಚರ್ಚ ನಡೆಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಇಲಾಖೆಯ ರೋಗಿಗಳ ಸೇವೆಯನ್ನು ಹಗಲಿರುಳು ಎನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಬದುಕು ಸರ್ಕಾರ ನೀಡುತ್ತಿರುವಂತ ಕಡಿಮೆ ವೇತನದಲ್ಲಿ ಕಷ್ಟವಾಗಿದೆ. ಕಳೆದ 10-15 ವರ್ಷಗಳಿಂದ ಕೆಲಸ ಮಾಡುತ್ತಿರುವಂತ ಗುತ್ತಿಗೆ ನೌಕರರಿಗೆ ಸಿಗೋದು ಮಾತ್ರ ಕನಿಷ್ಠ ಕಡಿಮೆ ವೇತನವಾಗಿದೆ. ಸರ್ಕಾರಿ ನೌಕರರಂತೇ ಕೆಲಸ ಮಾಡುವಂತ ಗುತ್ತಿಗೆ ನೌಕರರಿಗೆ ಯಾಕೆ ಇಷ್ಟು ತಾರತಮ್ಮ? ನಮ್ಮನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಅತಿಥಿ ಉಪನ್ಯಾಸಕರ ಗೌರವ ಧನವನ್ನು ಹೆಚ್ಚಳ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯ, ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡಲಾಗಿದೆ. ಆದ್ರೇ ಆರೋಗ್ಯ ಇಲಾಖೆಯ ಎನ್ ಹೆಚ್‌ಎಂ ಗುತ್ತಿಗೆ ನೌಕರರಿಗೆ ಮಾತ್ರ ಅದ್ಯಾವ ಭಾಗ್ಯವಿಲ್ಲ. ಸರ್ಕಾರಿ ನೌಕರರಂತೇ ನಮಗೂ ವೇತನ ನೀಡಬೇಕು. ನಮ್ಮ ಹುದ್ದೆಯನ್ನು ಖಾಯಂಗೊಳಿಸಲೇ ಬೇಕು. ಅಲ್ಲಿಯವರೆಗೆ ನಮ್ಮ ಅನಿರ್ಧಿಷ್ಟಾವಧಿಯ ಮುಷ್ಕರವನ್ನು ವಾಪಾಸ್ ಪಡೆಯುವುದಿಲ್ಲ ಎಂಬುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಚಿವ ಡಾ.ಕೆ ಸುಧಾಕರ್ ಶೇ.15ರಷ್ಟು ವೇತನ ಹೆಚ್ಚಳ ಮಾಡುವುದಾಗಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. 2 ದಿನಗಳಲ್ಲೇ ಈ ಸಂಬಂಧ ಆದೇಶ ಹೊರಡಿಸಲಾಗುವುದು ಎಂದಿದ್ದಾರೆ. ಆದ್ರೇ ಅವರು ಕೊಡುವ ಶೇ.15ರಷ್ಟು ವೇತನ ಯಾವುದಕ್ಕೆ ಸಾಲುತ್ತದೆ? ನಮಗೆ ಶೇ.15ರಷ್ಟು ವೇತನ ಹೆಚ್ಚಳ ಬೇಡ. ನಮ್ಮ ಹುದ್ದೆಯನ್ನು ಖಾಯಂಗೊಳಿಸಿ ಎಂದು ಒತ್ತಾಯಿಸಿದ್ದಾರೆ.