ಆನ್ಲೈನ್ ಗೇಮಿಂಗ್ ಆಯಪ್ ನಲ್ಲಿ 49ರೂ. ಕಟ್ಟಿ ರಾತ್ರೋರಾತ್ರಿ 1.50 ಕೋಟಿ ರೂ. ಗೆದ್ದ ಚಾಲಕ
ಭೋಪಾಲ್: ಐಪಿಎಲ್ ಆರಂಭಗೊಂಡಿದೆ. ಈ ಸಂದರ್ಭದಲ್ಲಿ ಆನ್ಲೈನ್ ಗೇಮಿಂಗ್ ಆಯಪ್ ನಲ್ಲಿ ತಮ್ಮದೇ ತಂಡವನ್ನು ರಚಿಸಿ ಹಣ ಗೆಲ್ಲುವ ಉತ್ಸಾಹದಲ್ಲಿ ಕೆಲ ಕ್ರೀಡಾಭಿಮಾನಿಗಳಿರುತ್ತಾರೆ. ಇಂಥದ್ದೇ ಕ್ರೀಡಾಭಿಮಾನಿಯೊಬ್ಬರು ಕೋಟಿ ಗೆದ್ದಿರುವ ಘಟನೆ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ನಡೆದಿದೆ.
ವೃತ್ತಿಯಲ್ಲಿ ಚಾಲಕನಾಗಿರುವ ಶಹಾಬುದ್ದೀನ್ ಮನ್ಸೂರಿ ಕಳೆದ ಎರಡು ವರ್ಷಗಳಿಂದ ಆನ್ಲೈನ್ ಗೇಮಿಂಗ್ ಆಯಪ್ ನಲ್ಲಿ ಟೀಮ್ ಮಾಡಿ ಅದೃಷ್ಟವನ್ನು ಪರೀಕ್ಷೆ ಮಾಡಿಸುತ್ತಲೇ ಇದ್ದಾರೆ. ಭಾನುವಾರ ಐಪಿಎಲ್ ನಲ್ಲಿ ನಡೆದ ಕೆಕೆಆರ್ ಹಾಗೂ ಪಂಜಾಬ್ ನಡುವಿನ ಪಂದ್ಯಕ್ಕೆ ತಮ್ಮ ಕನಸಿನ ತಂಡವನ್ನು ಮಾಡಿ 49 ರೂ.ಯನ್ನು ಕಟ್ಟಿದ್ದಾರೆ.
ಕೋಟಿ ಗೆಲ್ಲುವ ವಿಭಾಗದಲ್ಲಿ ತಂಡವನ್ನು ಕಟ್ಟಿದ ಶಹಾಬುದ್ದೀನ್ ಮನ್ಸೂರಿ ಪಂದ್ಯ ಮುಗಿದ ಬಳಿಕ ಕೋಟಿ ಗೆದ್ದಿದ್ದಾರೆ. ಶಹಾಬುದ್ದೀನ್ ಮನ್ಸೂರಿ ಅವರು 1.50 ಕೋಟಿ ರೂ.ವನ್ನು ಗೆಲ್ಲುವ ಮೂಲಕ ಅವರ ಜೀವನವೇ ಬದಲಾಗಿದೆ.
ಸದ್ಯ ಶಹಾಬುದ್ದೀನ್ ತನ್ನ ಆಯಪ್ ವ್ಯಾಲೆಟ್‌ನಿಂದ ರೂ 20 ಲಕ್ಷವನ್ನು ವಿತ್ ಡ್ರಾ ಮಾಡಿಕೊಂಡಿದ್ದಾರೆ. ವಿಜೇತ ಮೊತ್ತದ 1.5 ಕೋಟಿ ರೂ.ನಲ್ಲಿ ಒಟ್ಟು ರೂ.6 ಲಕ್ಷ ತೆರಿಗೆಯಾಗಿ ಕಡಿತವಾಗಿದೆ.
ಶಹಾಬುದ್ದೀನ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಬಂದ ಹಣದಿಂದ ಸ್ವಂತ ಮನೆ ಕಟ್ಟಿ, ತಾವೇ ಒಂದು ವ್ಯಾಪಾರವನ್ನು ಆರಂಭಿಸುವುದು ಅವರ ಕನಸಗಿದೆ.