ಅ.18ರಂದು ಬಿಸಿಸಿಐ ವಾರ್ಷಿಕ ಮಹಾಸಭೆ

ಅ.18ರಂದು ಬಿಸಿಸಿಐ ವಾರ್ಷಿಕ ಮಹಾಸಭೆ

ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಾರ್ಷಿಕ ಮಹಾಸಭೆಯು (ಎಜಿಎಂ) ಅಕ್ಟೋಬರ್ 18ರಂದು ಮುಂಬೈನಲ್ಲಿ ನಡೆಯಲಿದೆ.

ಈ ಸಭೆಯ ನಡಾವಳಿ ಪತ್ರವನ್ನು ಗುರುವಾರ ಸಂಜೆ ಎಲ್ಲ ರಾಜ್ಯಕ್ರಿಕೆಟ್ ಸಂಸ್ಥೆಗಳಿಗೆ ಕಳಿಸಲಾಗಿದೆ. ಸಭೆಯಲ್ಲಿ ಮಂಡಳಿಯ ಪದಾಧಿಕಾರಿಗಳ (ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಹಾಗೂ ಖಜಾಂಚಿ) ಚುನಾವಣೆ ಕೂಡ ನಡೆಯಲಿದೆ.

ಮುಂದಿನ ವರ್ಷದಿಂದ ಆರಂಭಿಸಲು ಉದ್ದೇಶಿಸಿರುವ ಮಹಿಳಾ ಐಪಿಎಲ್ ಟೂರ್ನಿ ಕುರಿತು ಚರ್ಚೆ ನಡೆಯಲಿದೆ.

ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ)ಗೆ ಭಾರತದ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗುವುದು. 77 ವರ್ಷದ ಎನ್. ಶ್ರೀನಿವಾಸನ್ ಹಾಗೂ ಬಿಸಿಸಿಐನ ಪ್ರಸ್ತುತ ಅಧ್ಯಕ್ಷ ಸೌರವ್ ಗಂಗೂಲಿ ಅವರಲ್ಲಿ ಒಬ್ಬರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡುವ ಕುರಿತು ಮಾತುಗಳು ಕೇಳಿಬಂದಿವೆ.

29 ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸುವ ನಿರೀಕ್ಷೆ ಇದೆ.

ಭಾರತ ಕ್ರಿಕೆಟಿಗರ ಸಂಘ (ಐಸಿಎ) ಅಪೆಕ್ಸ್ ಕೌನ್ಸಿಲ್‌ನಲ್ಲಿ ಇಬ್ಬರು ಪ್ರತಿನಿಧಿಗಳನ್ನು (ಪುರುಷ ಹಾಗೂ ಮಹಿಳೆ) ನೇಮಕ ಮಾಡಲಾಗುವುದು. ಮಂಡಳಿಯ ವಿವಿಧ ಸ್ಥಾಯಿ ಸಮಿತಿಗಳು, ಕ್ರಿಕೆಟ್ ಸಮಿತಿ ಹಾಗೂ ಅಂಪೈರ್ ಸಮಿತಿಗಳಿಗೆ ನೂತನ ಮುಖ್ಯಸ್ಥರನ್ನು ನೇಮಕ ಮಾಡುವ ನಿರೀಕ್ಷೆ ಇದೆ.

ಒಂಬುಡ್ಸ್‌ಮನ್ ಹಾಗೂ ನೈತಿಕ ಅಧಿಕಾರಿಯನ್ನು ನೇಮಿಸಿಕೊಳ್ಳುವ ಕುರಿತು ಈ ಸಂದರ್ಭದಲ್ಲಿ ಅನುಮೋದನೆ ಪಡೆಯುವ ನಿರೀಕ್ಷೆ ಇದೆ.