ಅಯ್ಯೋ..ಇದೆಂಥಾ ʼಹೃದಯ ವಿದ್ರಾವಕʼ : ಅಂಬುಲೆನ್ಸ್ ಸಿಗದೇ ಮಗಳ ಮೃತದೇಹ ಬೈಕ್‌ನಲ್ಲೇ ಹೊತ್ತೊಯ್ದ ತಂದೆ

ಅಯ್ಯೋ..ಇದೆಂಥಾ ʼಹೃದಯ ವಿದ್ರಾವಕʼ : ಅಂಬುಲೆನ್ಸ್ ಸಿಗದೇ ಮಗಳ ಮೃತದೇಹ ಬೈಕ್‌ನಲ್ಲೇ ಹೊತ್ತೊಯ್ದ ತಂದೆ

ಹೈದರಾಬಾದ್: ಆಸ್ಪತ್ರೆ ಸಿಬ್ಬಂದಿ ಅಂಬುಲೆನ್ಸ್ ಸೇವೆ ನೀಡಲು ನಿರಾಕರಿಸಿದ್ದರಿಂದ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬ ತನ್ನ 3 ವರ್ಷದ ಮಗಳ ಮೃತದೇಹವನ್ನು 65 ಕಿಮೀ ಬೈಕಿನಲ್ಲೇ ಹೊತ್ತೊಯ್ದ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಖಮ್ಮಂನಲ್ಲಿ ನಡೆದಿದೆ.

ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಲು ನಿರಾಕರಿಸಿದ್ದಾರೆ. ಇದರಿಂದ ವೆಟ್ಟಿ ಮಲ್ಲಯ್ಯ ಎಂಬವರು ಖಾಸಗಿ ಅಂಬುಲೆನ್ಸ್‌ ಹಣವಿಲ್ಲದೇ ಅಳುತ್ತಲೇ ಸುಮಾರು 65 ಕಿಮೀ ವರೆಗೆ ಮಗಳ ಮೃತದೇಹವನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಇವರು ಖಮ್ಮಂ ಜಿಲ್ಲೆಯ ಎಣುಕೂರು ಮಂಡಲದ ಕೋಟಾ ಮೇಡೆಪಲ್ಲಿ ಗ್ರಾಮದ ಆದಿವಾಸಿ ಕುಟುಂಬಕ್ಕೆ ಸೇರಿದವರು

ಆದಿವಾಸಿ ದಂಪತಿಯ ಪುತ್ರಿ ವೆಟ್ಟಿ ಸುಕ್ಕಿ (3)ಯನ್ನ ಅನಾರೋಗ್ಯದಿಂದಾಗಿ ಏಣಕೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚುವರಿ ಚಿಕಿತ್ಸೆಗಾಗಿ ಖಮ್ಮಂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗಳು ಮೃತಪಟ್ಟಿದ್ದಾಳೆ.

ನಂತರ ಬಾಲಕಿಯ ತಂದೆ ಸ್ವಗ್ರಾಮಕ್ಕೆ ಬಂದು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿಯ ಮೃತದೇಹವನ್ನು ಖಮ್ಮಂ ಸರ್ಕಾರಿ ಆಸ್ಪತ್ರೆಯಿಂದ ಹೊಸ ಮೆಡೆಪಲ್ಲಿ ಗ್ರಾಮಕ್ಕೆ ಸ್ಥಳಾಂತರಿಸಲು ಅಂಬುಲೆನ್ಸ್ ಸೇವೆ ಕೇಳಿದ್ದಾರೆ. ಇದಕ್ಕೆ ಆಸ್ಪತ್ರೆ ಸಿಬ್ಬಂದಿ ನಿರಾಕರಿದ್ದರಿಂದ ಗ್ರಾಮದ ಸಂಬಂಧಿಕರಿಂದ ಬೈಕ್ ತೆಗೆದುಕೊಂಡು ಅದರಲ್ಲೇ ಮಗಳ ಮೃತದೇಹ ಸಾಗಿಸಿದ್ದಾರೆ. ಸರ್ಕಾರಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ.