ಅನಾರೋಗ್ಯಕ್ಕೀಡಾಗಿದ್ದ ಹುಲಿ ಸೆರೆ: ಚಿಕಿತ್ಸೆಗಾಗಿ ಮೈಸೂರಿನ ಮೃಗಾಲಯಕ್ಕೆ

ಅನಾರೋಗ್ಯಕ್ಕೀಡಾಗಿದ್ದ ಹುಲಿ ಸೆರೆ: ಚಿಕಿತ್ಸೆಗಾಗಿ ಮೈಸೂರಿನ ಮೃಗಾಲಯಕ್ಕೆ

ಸಿದ್ದಾಪುರ (ಕೊಡಗು): ಅನಾರೋಗ್ಯದಿಂದ ಬಳಲುತ್ತಿದ್ದ 12 ವರ್ಷ ಪ್ರಾಯದ ಗಂಡು ಹುಲಿಯೊಂದನ್ನು ಇಲ್ಲಿನ ಮಾಲ್ದಾರೆ ಗ್ರಾಮದ ಆಸ್ತಾನ ಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸೆರೆ ಹಿಡಿದರು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಹುಲಿಯನ್ನು ಕಳುಹಿಸಿಕೊಡಲಾಗಿದೆ.

ಸಾಕಾನೆಗಳಾದ ಪ್ರಶಾಂತ, ಸುಗ್ರೀವ, ಶ್ರೀರಾಮ, ಹರ್ಷ, ವಿಕ್ರಂ, ಈಶ್ವರ ಆನೆಗಳ ಸಹಕಾರದೊಂದಿಗೆ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು. ವನ್ಯಜೀವಿ ವೈದ್ಯಾಧಿಕಾರಿ ಡಾ.ರಮೇಶ್ ಹಾಗೂ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಹುಲಿಗೆ ಅರಿವಳಿಕೆ ಚುಚ್ಚುಮದ್ದು ಪ್ರಯೋಗಿಸಿದರು. ಕೆಲಕಾಲ ಓಡಿದ ಹುಲಿ, ಬಳಿಕ ಅಸ್ತಾನ ಗ್ರಾಮದ ಬಳಿ ನಿತ್ರಾಣಗೊಂಡು ಬಿದ್ದಿತು. ನಂತರ, ಹುಲಿಯನ್ನು ಬಲೆ ಹಾಕಿ ಹಿಡಿಯಲಾಯಿತು. ಹುಲಿಯ‌ ಹಲ್ಲು ಹಾಗೂ ಕಾಲಿನ ಭಾಗದಲ್ಲಿ ಗಾಯವಾಗಿದ್ದು, ಆಹಾರ ಸೇವನೆ ಮಾಡದಿರುವುದರಿಂದ ಹುಲಿ ಸಾಕಷ್ಟು ಬಳಲಿದೆ. ವನ್ಯಜೀವಿ ವೈದ್ಯಾದಿಕಾರಿ ಡಾ.ಚಿಟ್ಟಿಯಪ್ಪ ಹಾಗೂ ಡಾ.ರಮೇಶ್ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಆರೈಕೆಗಾಗಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಕಳುಹಿಸಿದರು.