ಅಧಿಕಾರಕ್ಕಾಗಿ ಏನೆಲ್ಲ ನಡೆಯುತ್ತೆ ಅನ್ನೋದಕ್ಕೆ ಪುಲ್ವಾಮಾ ದಾಳಿ ಉದಾಹರಣೆ ಕೊಪ್ಪಳ ಸರ್ಕಾರಿ ಶಿಕ್ಷಕನ ವಿವಾದ
ಕೊಪ್ಪಳ: ಪುಲ್ವಾಮಾ ದಾಳಿಯು ಒಂದು ವ್ಯವಸ್ಥಿತ ಪಿತೂರಿ ಎಂದು ವಾಟ್ಸ್ಆಯಪ್ ಸ್ಟೇಟಸ್ ಹಾಕುವ ಮೂಲಕ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಕನಕಗಿರಿ ತಾಲೂಕಿನ ಗೋಡಿನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಈ ರೀತಿಯಾಗಿ ಸ್ಟೇಟಸ್ ಹಾಕಿಕೊಂಡಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪುಲ್ವಾಮಾ ದಾಳಿ ಒಂದು ವ್ಯವಸ್ಥಿತ ಪಿತೂರಿಯಾಗಿದೆ. ಇಲ್ಲಿ ಅಧಿಕಾರಕ್ಕಾಗಿ ಏನೆಲ್ಲಾ ನಡೆಯುತ್ತದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿದೆ. ಘಟನೆಯಲ್ಲಿ ಮಡಿದ ವೀರರಿಗೆ ಸ್ಮರಣೆಗಳು. ಇದೇ ವ್ಯವಸ್ಥೆ ನಮ್ಮಲ್ಲಿ ಮುಂದುವರಿದರೆ ಭಾರತದ ಭವಿಷ್ಯ ಕೂಡಾ ಬ್ಲಾಕ್ ಡೇ ಆಗಬಹುದು. ನಾವು ಎಚ್ಚೆತ್ತುಕೊಳ್ಳಬೇಕು ದೇಶ ಮೊದಲು ಅಂತಾ ಶಿಕ್ಷಕ ಸ್ಟೇಟಸ್ನಲ್ಲಿ ಬರೆದುಕೊಂಡಿದ್ದರು.
ಕಳೆದ ಫೆ. 14ರಂದು ಪುಲ್ವಾಮಾ ದಾಳಿ 4 ವರ್ಷ ಕಳೆದಿವೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಅನೇಕರು ದಾಳಿಯಲ್ಲಿ ಮಡಿದ ವೀರರಿಗೆ ಗೌರವ ಸಮರ್ಪಿಸಿದರು. ಇದೇ ದಿನ ಕೊಪ್ಪಳ ಶಿಕ್ಷಕ ಹಾಕಿಕೊಂಡಿದ್ದ ಸ್ಟೇಟಸ್ನ ಸ್ಕ್ರೀನ್ಶಾಟ್ ವೈರಲ್ ಆಗಿದ್ದು,
ಅನೇಕರು ಶಿಕ್ಷಕನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.2019ರ ಫೆ. 14ರ ಮುಂಜಾನೆ ಜಮ್ಮುವಿನಿಂದ 78 ವಾಹನಗಳಲ್ಲಿ 2,547 ಯೋಧರ ಕಾನ್ವಾಯ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಶ್ರೀನಗರದ ಕಡೆಗೆ ಹೊರಟಿತ್ತು. ಆವಂತಿಪೋರಾ ಸಮೀಪ ಲೆಥಾಪೋರಾದಲ್ಲಿ ಮಧ್ಯಾಹ್ನ 3.15ಕ್ಕೆ ಭದ್ರತಾ ಸಿಬ್ಬಂದಿಯಿದ್ದ ಒಂದು ಬಸ್ಗೆ ಸ್ಫೋಟಕ ತುಂಬಿದ್ದ ಕಾರನ್ನು 22 ವರ್ಷದ ಅದಿಲ್ ಅಹ್ಮದ್ ದರ್ ಎಂಬಾತ ಡಿಕ್ಕಿ ಹೊಡೆಸಿ ಸ್ಫೋಟಿಸಿದ,
ಇದರಿಂದ 76ನೇ ಬೆಟಾಲಿಯನ್ನ 40 ಯೋಧರು ಹುತಾತ್ಮರಾದರು. ಸ್ಫೋಟಕ್ಕೆ ಸುಮಾರು 80 ಕೆಜಿ ಸ್ಫೋಟಕ ಬಳಸಲಾಗಿತ್ತು. ಭಾರತದ ತನಿಖಾ ಸಂಸ್ಥೆಗಳು 19 ಆರೋಪಿಗಳನ್ನು ಗುರುತಿಸಿದವು. 2021ರ ಆಗಸ್ಟ್ ಹೊತ್ತಿಗೆ ಇತರ ಆರು ಜನರೊಂದಿಗೆ ಪ್ರಮುಖ ಆರೋಪಿಗಳು ಹತರಾದರು. ಏಳು ಜನರನ್ನು ಬಂಧಿಸಲಾಯಿತು.
ಉಗ್ರರ ಅಟ್ಟಹಾಸಕ್ಕೆ ಉತ್ತರ ನೀಡಲು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಬಾಲಾಕೋಟ್ನಲ್ಲಿರುವ ಜೈಷ್-ಎ-ಮೊಹಮ್ಮದ್ ಸಂಟನೆಯ ಉಗ್ರಗಾಮಿಗಳ ತಾಣಗಳ ಮೇಲೆ ಫೆ. 26ರಂದು ಭಾರತೀಯ ವಾಯುಪಡೆಯು 12 ಫೈಟರ್ ವಿಮಾನಗಳ ಮೂಲಕ ಬಾಂಬ್ ದಾಳಿ ನಡೆಸಿತು.
ಇದರಿಂದ ಉಗ್ರಗಾಮಿಗಳ ಅನೇಕ ಶಿಬಿರಗಳು ನಿರ್ನಾಮ ಆದವು. ಮರುದಿನ (ಫೆ.27) ಬೆಳಗ್ಗೆ ಪಾಕ್ ವಿಮಾನಗಳು (ಅಮೆರಿಕದ ಎಫ್16 ಫೈಟರ್ ಜೆಟ್ ಸಹಿತ) ಭಾರತದೊಳಗೆ ನುಗ್ಗಿದವು. ಇದನ್ನು ಹಿಮ್ಮೆಟ್ಟಿಸಲು ಮಿಗ್-21, ಸುಖೋಯ್, ಮಿರಾಜ್ 2000 ವಿಮಾನಗಳು ಮುಂದಾದವು.
ಮಿಗ್-21 ಬೈಸನ್ ವಿಮಾನದಲ್ಲಿ ಪಾಕ್ ವಿಮಾನವನ್ನು ಬೆನ್ನಟ್ಟಿದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್, ಈ ಪ್ರಯತ್ನದಲ್ಲಿ ಯಶಸ್ವಿಯಾದರು. ಆದರೆ, ಅವರ ವಿಮಾನ ಪತನವಾಯಿತು. ಅವರು ಪ್ಯಾರಾಚೂಟ್ ಮೂಲಕ ಇಳಿದ ಜಾಗ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ವಾಗಿತ್ತು.
ಅಲ್ಲಿ ಅವರನ್ನು ಬಂಧಿಸಲಾಯಿತು. ಸುಮಾರು 60 ತಾಸಿನ ನಂತರ ಅವರನ್ನು ವಾಪಸು ಕರೆತರುವ ಭಾರತದ ರಾಜತಾಂತ್ರಿಕ ಪ್ರಯತ್ನ ಲಪ್ರದವಾಯಿತು. ತನ್ನ ಧೀರಯೋಧರ ಸಾವಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕ್ ನೆಲದೊಳಗೇ ನುಗ್ಗಿ ಸಾಹಸಗೈದಿತು. ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹುಯಿಲೆಬ್ಬಿಸಿದರೂ ಭಾರತ ಇದನ್ನು ಜಾಣ್ಮೆಯ ಕಾರ್ಯತಂತ್ರದಿಂದ ನಿಭಾಯಿಸಿತು.