ಅದಾನಿ ಸಮೂಹದ ಕೈಗೆ ಎನ್‌ಡಿಟಿವಿ ನಿಯಂತ್ರಣ
ನವದೆಹಲಿ: ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್‌ನ (ಎನ್‌ಡಿಟಿವಿ) ಸ್ಥಾಪಕರಾದ ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ಹೊಂದಿರುವ ಒಟ್ಟು ಶೇಕಡ 32.26ರಷ್ಟು ಷೇರುಪಾಲಿನಲ್ಲಿ ಶೇ 27.26ರಷ್ಟನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಅದಾನಿ ಸಮೂಹ ಶುಕ್ರವಾರ ತಿಳಿಸಿದೆ.
ಅದಾನಿ ಸಮೂಹಕ್ಕೆ ಶೇ 27.26ರಷ್ಟು ಷೇರುಗಳನ್ನು ಮಾರಾಟ ಮಾಡುತ್ತಿರುವುದಾಗಿ ಎನ್‌ಡಿಟಿವಿ ಪ್ರವರ್ತಕರು ಡಿಸೆಂಬರ್ 23ರಂದು ಘೋಷಿಸಿದ್ದರು.
ಅದಾನಿ ಸಮೂಹವು ಪ್ರತಿ ಷೇರಿಗೆ ₹342.65ರಂತೆ ಎನ್‌ಡಿಟಿವಿ ಪ್ರವರ್ತಕರ 1.75 ಕೋಟಿ ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ. ಇದರಿಂದಾಗಿ ಸ್ವಾಧೀನದ ಒಟ್ಟು ಮೊತ್ತವು ₹602.30 ಕೋಟಿ ಆಗಿದೆ.
ಈ ಸ್ವಾಧೀನದ ಬಳಿಕ ಅದಾನಿ ಸಮೂಹವು ಎನ್‌ಡಿಟಿವಿಯಲ್ಲಿ ಶೇ 69.71ರಷ್ಟು ಷೇರುಪಾಲನ್ನು ಹೊಂದಿದಂತಾಗಿದೆ.
ಷೇರು ಮಾರಾಟದ ನಂತರ ಪ್ರವರ್ತಕರ ಬಳಿ ಎನ್‌ಡಿಟಿವಿಯ ಶೇ 5ರಷ್ಟು ಷೇರುಪಾಲು ಮಾತ್ರವೇ ಉಳಿದಿದೆ.