ಸಿದ್ದರಾಮಯ್ಯರ ಹೆಣ ತೆಗೆದುಕೊಂಡು ನಾವೇನು ಮಾಡೋಣ : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ

ಸಿದ್ದರಾಮಯ್ಯರ ಹೆಣ ತೆಗೆದುಕೊಂಡು ನಾವೇನು ಮಾಡೋಣ : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗ : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೀವಂತವಾಗಿಯೇ ಬಿಜೆಪಿಗೆ ಸೇರಿಸಿಕೊಳ್ಳಲ್ಲ, ಅವರ ಹೆಣ ತೆಗೆದುಕೊಂಡು ನಾವೇನು ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಜೀವಂತವಾಗಿಯೇ ಬಿಜೆಪಿಗೆ ಸೇರಿಸಿಕೊಳ್ಳಲ್ಲ, ಅವರ ಹೆಣ ತೆಗೆದುಕೊಂಡು ನಾವು ಏನು ಮಾಡೋಣ, ಸಿದ್ದರಾಮಯ್ಯರ ಹೆಣ ನಾಯಿಯೂ ಮೂಸಲ್ಲ, ನಾವೇಕೆ ಮುಟ್ಟಬೇಕು.

ಮಾಜಿ ಸಿಎಂ ಹುಚ್ಚರ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯನವರೇ ಬಾದಾಮಿ ದೂರ ಆಗುವುದಿದ್ದರೆ ಮತ್ತೆ ಚಾಮುಂಡೇಶ್ವರಿಗೆ ವಾಪಸ್ ಹೋಗಿ. ಅದು ನಿಮ್ಮದೆ ಕ್ಷೇತ್ರ. ಅನೇಕ ಬಾರಿ ಅಲ್ಲಿಂದ ಗೆದಿದ್ದೀರಿ. ಅಲ್ಲಿ ಯಾಕೆ ಹೋಗುತ್ತಿಲ್ಲ? ಯಾಕೆ ಕೋಲಾರ ಹುಡುಕಿಕೊಂಡು ಹೊರಟಿದ್ದೀರಿ ? ಆ ಮತದಾರರಿಗೆ ನಿಮ್ಮ ಹಣೆಬರಹ ಗೊತ್ತು. ಈ ವ್ಯಕ್ತಿ ನಂಬಿಕಸ್ತನಲ್ಲ ಎಂದರು. ಈ ಹಿನ್ನಲೆಯಲ್ಲಿ ಸೋಲುವ ಭಯದಿಂದ ಸಿದ್ದು ಕ್ಷೇತ್ರದ ಹುಡುಕಾಟ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಸಂಸದೆ ಸುಮಲತಾ ಅಂಬರೀಶ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಬರುವ ದಿನಗಳಲ್ಲಿ ದೇಶದಲ್ಲಿ ಬಿಜೆಪಿ ಪಕ್ಷ ಬಿಟ್ಟು ಬೇರೆ ಯಾವ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಇದು ಸತ್ಯ. ಈ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ರಾಜ್ಯದಲ್ಲಿ ಬರುತ್ತೆ. ಮತ್ತೆ ಬಿಜೆಪಿ ಸರ್ಕಾರ ಅಧಿಕಾರ ಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.