ಯೋಗಕ್ಷೇಮ ನೋಡಿಕೊಳ್ಳದ ಮಗಳಿಂದ ಪೋಷಕರಿಗೆ ಆಸ್ತಿ ವಾಪಸ್ ಕೊಡಿಸಿದ ಉಪ ವಿಭಾಗಧಿಕಾರಿ!

ಯೋಗಕ್ಷೇಮ ನೋಡಿಕೊಳ್ಳದ ಮಗಳಿಂದ ಪೋಷಕರಿಗೆ ಆಸ್ತಿ ವಾಪಸ್ ಕೊಡಿಸಿದ ಉಪ ವಿಭಾಗಧಿಕಾರಿ!

ಡಿಕೇರಿ : ತಂದೆ ತಾಯಿಯರ ಯೋಗಕ್ಷೇಮ ನೋಡಿಕೊಳ್ಳದ ಕಾರಣ ಮಗಳ ಹೆಸರಿನಲ್ಲಿದ್ದ ಆಸ್ತಿಯನ್ನು ಇಲ್ಲಿನ ಉಪ ವಿಭಾಗಧಿಕಾರಿ ಅವರ ನ್ಯಾಯಾಲಯ ತಾಯಿಗೆ ವಾಪಸ್ ಕೊಡಿಸಿದೆ. ಕುಶಾಲನಗರ ತಾಲ್ಲೂಕಿನ ಬೊಳ್ಳೂರು ಗ್ರಾಮದ ಬಿ.ಎಸ್.ಜಾನಕಿ ತಮ್ಮ ಹೆಸರಿನಲ್ಲಿ 0.15 ಎಕ್ರೆ ಆಸ್ತಿಯನ್ನು ಹೊಂದಿದ್ದರು.

ಅವರಿಂದ ಅವರ ಎರಡನೇ ಮಗಳಾದ ಜಯಲಕ್ಷಿ ಬಿ.ಎಸ್ ದಾನಪತ್ರದ ಮೂಲಕ ತಮ್ಮ ಹೆಸರಿಗೆ ಖಾತೆಯನ್ನು ಮಾಡಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಪೋಷಕರ ಯೋಗಕ್ಷೇಮ ನೋಡಿಕೊಳ್ಳದೆ ನಿರ್ಲಕ್ಷಿಸಿದರು. ಇದರಿಂದ ನೊಂದ ಪೋಷಕರು ಇವರು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಅವರು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರಿಗೆ ಅರ್ಜಿ ಸಲ್ಲಿಸಿ ದಾನಪತ್ರ ರದ್ದುಗೊಳಿಸಿ ಆಸ್ತಿಯನ್ನು ವಾಪಸ್ಸು ಕೊಡಿಸುವಂತೆ ಮನವಿ ಮಾಡಿದ್ದರು.

ಆ ನಿಟ್ಟಿನಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ಅರ್ಜಿಯನ್ನು ಉಪ ವಿಭಾಗಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾಯಿಸಿ ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದರು.

ವಿಚಾರಣೆ ನಡೆಸಿದ ಉಪವಿಭಾಗಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರು ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ 2007ರ ಅಡಿ ದಾನಪತ್ರ ರದ್ದುಗೊಳಿಸಿ ಅಸ್ತಿಯನ್ನು ಬಿ.ಎಸ್.ಜಾನಕಿ ಅವರ ಹೆಸರಿಗೆ ವರ್ಗಾಯಿಸುವಂತೆ ಆದೇಶ ನೀಡಿರುತ್ತಾರೆ.