ಮೋದಿಯನ್ನು ಭ್ರಷ್ಟರನ್ನಾಗಿಸಲು ಯಾರಿಂದಲೂ ಸಾಧ್ಯವಿಲ್ಲ: ಆರ್‌ಎಸ್‌ಎಸ್ ಮುಖಂಡ ರಾಮ ಮಾಧವ್
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ರಹಿತರಷ್ಟೆ ಅಲ್ಲ, ಅವರನ್ನು ಭ್ರಷ್ಟರನ್ನಾಗಿಸಲು ಯಾರಿಂದಲೂ ಸಾಧ್ಯವಿಲ್ಲಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಾಮ ಮಾಧವ್ ಹೇಳಿದ್ದಾರೆ.
ಮಂಥನ ಹೆಬ್ಬಾಳದ ವತಿಯಿಂದ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಸಭಾಂಗಣದಲ್ಲಿ ʼಉತ್ತಮ ಆಡಳಿತ-ಭಾರತದ ದೃಷ್ಟಿಕೋನʼ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾನ್ಯವಾಗಿ ಭ್ರಷ್ಟಾಚಾರ ಎಂದ ಕೂಡಲೆ ಎಲ್ಲೋ ತಾಲೂಕು ಕಚೇರಿಯಲ್ಲಿ ಹಣ ಪಡೆದವನನ್ನೇ ಬಿಂಬಿಸಲಾಗುತ್ತದೆ. ಆದರೆ ಕೋಟಿಗಳ ಲೆಕ್ಕದಲ್ಲಿ ಜಿಲ್ಲಾ ಕೇಂದ್ರದಲ್ಲಿರುವವರು ಲಂಚ ಪಡೆಯುವುದನ್ನು ನೋಡುವುದಿಲ್ಲ. ರಾಜ್ಯದ ಕೇಂದ್ರದಲ್ಲಿ ಕುಳಿತು ನೂರಾರು ಕೋಟಿ ರೂ. ಲಂಚ ಪಡೆಯುವವರನ್ನು ಗಮನಿಸುವುದೇ ಇಲ್ಲ.
ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕು ಎನ್ನುವುದರಲ್ಲಿ ಯಾರಿಗೂ ಭಿನ್ನಾಭಿಪ್ರಾಯ ಇಲ್ಲ. ಭ್ರಷ್ಟಾಚಾರವನ್ನು ಕೆಳಮಟ್ಟದಿಂದ ನಿರ್ಮೂಲನೆ ಮಾಡಬೇಕು ಎಂಬ ಮಾತು ಕೇಳಿಬರುತ್ತಿರುತ್ತದೆ. ಆದರೆ ನಿಜವಾಗಿಯೂ ಭ್ರಷ್ಟಾಚಾರವನ್ನು ಮೇಲಿನಿಂದ ನಾಶಪಡಿಸಬೇಕು.
ನಾಯಕನಾದವನು ಭ್ರಷ್ಟಾಚಾರರಹಿತನಾಗಿರಬೇಕು ಎಂದು ಚಾಣಕ್ಯ ಹೇಳಿದ್ದಾರೆ. ಪ್ರಧಾನಿ ಮೋದಿಯವರು ಭ್ರಷ್ಟಾಚಾರ ರಹಿತರಷ್ಟೆ ಅಲ್ಲ, ಅವರನ್ನು ಭ್ರಷ್ಟರಾಗಿಸಲು ಸಾಧ್ಯವೇ ಇಲ್ಲ ಎಂದರು.
ಹಿಂದಿನ ಸಮಯದಲ್ಲಿ ಗ್ರಾಮೀಣ ಪ್ರದೇಶದ ಜನರಿಗೂ ಸರ್ಕಾರಕ್ಕೂ ಸಂಬಂಧವೇ ಇರುತ್ತಿರಲಿಲ್ಲ. ಅವರ ಪಾಡಿಗೆ ಜೀವನ ಮಾಡುತ್ತಿದ್ದರು. ಆದರೆ ಈಗಂತೂ, ಸರ್ಕಾರದೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಪರ್ಕ, ಸಂವಹನ ಇಲ್ಲದ ದಿನವೇ ಇಲ್ಲ ಎನ್ನುವಂತಾಗಿದೆ. ಇದು ಭಾರತದ ಮಾದರಿ ಆಡಳಿತ ವ್ಯವಸ್ಥೆ ಅಲ್ಲ. ಇದೇ ಕಾರಣಕ್ಕೆ ಪ್ರಧಾನಿ ಮೋದಿಯವರು ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಎಂದಿದ್ದಾರೆ. ಪ್ರಜಾಪ್ರಭುತ್ವವು ಒಪ್ಪಿಗೆಯಾದರೂ ಅದನ್ನು ಭಾರತದ ವ್ಯವಸ್ಥೆಗೆ ಅನುಗುಣವಾಗಿ ಅಳವಡಿಸಿಕೊಳ್ಳಬೇಕು.