ಜ.12ರಂದು ಧಾರವಾಡದಲ್ಲಿ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ : ಜಿಲ್ಲಾಧಿಕಾರಿ ಗುರುದತ್ತ

ಧಾರವಾಡ : ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ 26ನೇಯ ಯುವಜನೋತ್ಸವ ಜರುಗುತ್ತಿದ್ದು, ಅತಿಥಿಗಳ ಸ್ವಾಗತಕ್ಕೆ, ಕಾರ್ಯಕ್ರಮಗಳ ಶಿಸ್ತುಬದ್ದ ಆಯೋಜನೆಗೆ ಜಿಲ್ಲಾಡಳಿತ ಸಂಭ್ರಮದಿಂದ ಬರದ ಸಿದ್ಧತೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಯುವಜನೋತ್ಸವದ ಸಿದ್ಧತೆ ಕುರಿತು ಮಾದ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ, ಮಾತನಾಡಿದರು. ರಾಷ್ಟ್ರೀಯ ಯುವಜನೋತ್ಸವದ ಯಶಸ್ವಿಗಾಗಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಸತಿ, ಊಟ, ಸಾರಿಗೆ, ವೇದಿಕೆ ಸೇರಿದಂತೆ ವಿವಿಧ ಕಾರ್ಯಗಳ ಕುರಿತು 17ಕ್ಕೂ ಹೆಚ್ಚು ಸಮಿತಿಗಳನ್ನು ರಚಿಸಿ, ಕಾರ್ಯಗಳ ಹಂಚಿಕೆ ಮಾಡಲಾಗಿದೆ.
ರಾಷ್ಟ್ರೀಯ ಯುವಜನೋತ್ಸವದ ಉದ್ಘಾಟನೆಯನ್ನು ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡುವರು. ಉದ್ಘಾಟನಾ ಕಾರ್ಯಕ್ರಮವು ಹುಬ್ಬಳ್ಳಿ ರೈಲ್ವೇ ಮೈದಾನದಲ್ಲಿ ಜರುಗುವುದು. ಜನವರಿ 13 ರಿಂದ 16 ರವರೆಗೆ ವಿವಿಧ ರೀತಿಯ ಸ್ಪರ್ಧೇಗಳು ಧಾರವಾಡ ನಗರದ ಕರ್ನಾಟಕ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಲಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ರಾಷ್ಟ್ರೀಯ ಯುವಜನೋತ್ಸವದಲ್ಲಿ ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲು ನಿರ್ಧರಿಸಲಾಗಿದೆ. ಯುವಜನೋತ್ಸವದಲ್ಲಿ ರಾಷ್ಟ್ರದ ವಿವಿಧ ರಾಜ್ಯಗಳ ಸುಮಾರು 7,500 ಜನ ಯುವ ಕಲಾವಿದರು ತಮ್ಮ ಪ್ರದರ್ಶನ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲ ಪ್ರತಿನಿಧಿಗಳಗೆ, ಯೋಗಾ ಮ್ಯಾಟ್, ಧಾರವಾಡ ಪೇಢಾ, ಗರಗ ಖಾದಿ ಕೇಂದ್ರದಿಂದ ರಾಷ್ಟ್ರಧ್ವಜವಿರುವ ಒಂದು ಪ್ರೇಮ್ ಕೊಡಲು ತೀರ್ಮಾನಿಸಿದ್ದು ಈ ಎಲ್ಲ ವಸ್ತುಗಳನ್ನು ಸ್ಥಳೀಯ ಸಂಸ್ಥೆಗಳು ಹಾಗೂ ಇನ್ನಿತರ ಕಂಪನಿಗಳು ಪ್ರಾಯೋಜಕತ್ವವಹಿಸಿಕೊಳ್ಳುತ್ತಿವೆ.ಈ ಮೂಲಕ ಧಾರವಾಡ ಬ್ರ್ಯಾಂಡ್ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶ ಮಾಡುತ್ತಿರುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.