ದೇಹವನ್ನು ಮೀರಿ ಕಣ ಕಣದಲ್ಲೂ ಶಿವನಾದರು!

ಬೆಳಗಿನ ಚುಮಚುಮು ಚಳಿ. ಮೈಮುರಿದುಕೊಂಡು ಹಾಸಿಗೆಯಿಂದ ಏಳುವುದೇ ಕಷ್ಟ. ಸೂರ್ಯನೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಎದ್ದು ಮುಖ ತೋರಿಸಲಿಲ್ಲ. ಅಂತಹುದರಲ್ಲಿ ಜ್ಞಾನಸೂರ್ಯನ ಪ್ರಖರ ತೇಜಕ್ಕೆ ಒಡ್ಡಿಕೊಂಡು ಮನಸಿಗೆ ಅಂಟಿದ ಜಾಡ್ಯವನ್ನು ಹೋಗಲಾಡಿಸಿಕೊಳ್ಳಲೆಂದು ನೂರಾರು, ಊಹೂಂ ಸಾವಿರಾರು ಮಂದಿ ಮೈದಾನದ ತುಂಬೆಲ್ಲಾ ನೆರೆಯುತ್ತಾರಲ್ಲ; ಇಂತಹ ಅಚ್ಚರಿ ನೋಡಲು ಸಿಗುತ್ತಿದ್ದುದು ಕರ್ನಾಟಕದ ಉತ್ತರ ಭಾಗದಲ್ಲಿ ಮಾತ್ರ.
ಅಂತಹುದೊಂದು ಶಕ್ತಿ ಇದ್ದಾಗ್ಯೂ, 'ನಡೆದಾಡುವ ದೇವರು' ಎಂದೇ ಖ್ಯಾತರಾಗಿದ್ದಾಗ್ಯೂ ಅವರು ನಿಂತ ನೆಲವನ್ನು ಕಳೆದುಕೊಳ್ಳಲಿಲ್ಲ. ಕೀರ್ತಿಪಿಶಾಚಿ ತಲೆಯೇರಲು ಬಿಡಲಿಲ್ಲ. ಸಹಜವಾಗಿ, ಮಗುವಿನಂತೆ ಬದುಕಿದರು. ಒಮ್ಮೆ ಅವರೊಡನೆ ಬೆಳಗಿನ ನಡಿಗೆಯಲ್ಲಿ ನಿರತನಾಗಿದ್ದಾಗ ಕುರ್ತಾ ಕುತ್ತಿಗೆಯತ್ತ ಹರಿದಿರುವುದನ್ನು ಕಂಡು, ಸಂಕೋಚದಿಂದಲೇ ಹೀಗೇಕೆ? ಎಂದು ಪ್ರಶ್ನಿಸಿದೆ. ಅವರು ನಗುತ್ತಲೇ 'ಬಟ್ಟೆ ಇನ್ನೂ ಚೆನ್ನಾಗಿದೆ. ಪೂರ್ಣ ಜೀರ್ಣವಾಗುವವರೆಗೂ ಬಳಸುವೆ' ಎಂದರು! ಅವಾಕ್ಕಾದೆ. ಅವರು ಕೇಳಿದರೆ ಅಷ್ಟೇ ಏಕೆ? ಬೇಡವೆಂದು ಹೇಳದೇ ಸುಮ್ಮನಿದ್ದರೂ ಸಾಕಿತ್ತು. ಬಟ್ಟೆಯ ರಾಶಿಯೇ ಬಂದು ಬೀಳುತ್ತಿತ್ತು. ಆದರೆ ಬೈರಾಗಿಯ ಬದುಕನ್ನು ಆವಾಹಿಸಿಕೊಂಡವಗೆ ಬಟ್ಟೆಯ ಚಿಂತೆಯೇಕೆ? ಕುವೆಂಪು ವಿವೇಕಾನಂದರ ಸನ್ಯಾಸಿ ಗೀತೆಯನ್ನು ಅನುವಾದಿಸುತ್ತ ಬರೆಯುತ್ತಾರಲ್ಲ 'ಗಗನವೇ ಮನೆ, ಹಸುರೆ ಹಾಸಿಗೆ ಮನೆಯು ಸಾಲ್ವುದೆ ಚಾಗಿಗೆ?' ಅಂತ. ಅಕ್ಷರಶಃ ಆ ಹಾಡಿಗೆ ಅನ್ವರ್ಥವಾಗಿದ್ದರು ಅವರು.
ಮನೆಯಲ್ಲೇನೂ ಬಡತನವಿರಲಿಲ್ಲ. ತಂದೆ ಜಮೀನ್ದಾರರು. ಅವರ ಮನೆಯೇ 40 ಅಂಕಣದ್ದು. ಆದರೆ, ಸಿರಿವಂತಿಕೆ ಎಂದಿಗೂ ಅವರನ್ನು ಸೆಳೆಯಲಿಲ್ಲ. 14ರ ವಯಸ್ಸಿನಲ್ಲಿಯೇ ಶಾಲೆಗೆ ಹೋದ ಹುಡುಗ ಕಾಣೆಯಾಗಿ ಊರ ದೇವಸ್ಥಾನದಲ್ಲಿ ಧ್ಯಾನಕ್ಕೆ ಕೂರುತ್ತಿದ್ದುದನ್ನು ಗಮನಿಸಿದವರಿದ್ದಾರೆ. ಮುಂದೆ ಪ್ರವಚನ ಮಾಡುತ್ತ ಬಂದ ಮಲ್ಲಿಕಾರ್ಜುನ ಸ್ವಾಮಿಗಳ ಪ್ರಭಾವಕ್ಕೆ ಒಳಗಾದ ತರುಣ ಅವರನ್ನೇ ಗುರುವಾಗಿ ಸ್ವೀಕರಿಸಿ ಮನೆಯನ್ನು ತ್ಯಾಗ ಮಾಡಿದ. ಗೀತೆಯಿಂದ ಹಿಡಿದು ಯೋಗಸೂತ್ರಗಳವರೆಗೆ, ಉಪನಿಷತ್ತುಗಳಿಂದ ಶರಣ ಸಾಹಿತ್ಯದವರೆಗೆ ಎಲ್ಲವನ್ನೂ ಕರತಲಾಮಲಕವಾಗಿಸಿಕೊಂಡ ಶ್ರೀಗಳು ಗುರುಗಳ ಆದೇಶದ ಮೇರೆಗೆ ಅವರ ಎಲ್ಲ ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡು ಮುನ್ನಡೆದರು. ವಿಜಯಪುರದ ಅವರ ಜ್ಞಾನ ಯೋಗಾಶ್ರಮ ಇತರೆಲ್ಲ ಮಠಗಳಂತೆ ಆಕಾರದಲ್ಲಿ ಬೃಹತ್ತಾದ್ದೋ, ವಿಸ್ತಾರದಲ್ಲಿ ಆಲದಂತೆ ಹಬ್ಬಿದ್ದೋ ಅಲ್ಲ. ಅದು ಅತ್ಯಂತ ಸಾಮಾನ್ಯವಾಗಿ ಯಾರ ದೃಷ್ಟಿಯೂ ತಾಕದಂತೆ ಶ್ರೀಗಳಷ್ಟೇ ಸರಳವಾಗಿರುವಂಥದ್ದು. ಅದು ಜ್ಞಾನದಾಸೋಹದ ಕೇಂದ್ರ ಕೂಡ!
ಸಿದ್ದೇಶ್ವರ ಸ್ವಾಮಿಗಳು ಇತರೆಲ್ಲ ಮಠಾಧೀಶರುಗಳಂತೆ ಶಾಲೆ-ಕಾಲೇಜುಗಳನ್ನು ಕಟ್ಟುವ, ಆಸ್ಪತ್ರೆಗಳನ್ನು ಕಟ್ಟುವ ಹಠಕ್ಕೆ ಬಿದ್ದವರಲ್ಲ. ಅವರು ನೊಂದ ಹೃದಯಕ್ಕೆ ತಂಪೆರೆವ ಪ್ರವಚನಗಳ ಮಾರ್ಗವನ್ನು ಅನುಸರಿಸಿದರು. ಜೀವನದ ಕೊನೆಯ ಉಸಿರಿನವರೆಗೂ ಅದೇ ಅವರ ಕಾಯಕ. ಗುರುಗಳ ಆದೇಶವನ್ನು ಶ್ರದ್ಧೆಯಿಂದ ಪಾಲಿಸಿದರು!
ಇಷ್ಟು ಖ್ಯಾತನಾಮರೂ, ಭಕ್ತರ ಹೃದಯ ಸಿಂಹಾಸನಾಧೀಶ್ವರರೂ ಆದ ಸ್ವಾಮಿಗಳು ಜೋಳಿಗೆ ಹಿಡಿದು ಕೈ ಚಾಚಿದ ಉದಾಹರಣೆಯಿಲ್ಲ. ಅಕ್ಷರಶಃ ಅವರದ್ದು ಅಪರಿಗ್ರಹ ಯೋಗ. ಅವರು ಹಾಕುವ ಕುರ್ತಾಕ್ಕೆ ಜೇಬೇ ಇರಲಿಲ್ಲ. ಒಮ್ಮೆ ಬಾಯ್ಮಾತಿಗೆ ಕೇಳಿದಾಗ, 'ಏನ ತುಂಬಲೆಂದು ಜೇಬು' ಎಂದು ನಕ್ಕುಬಿಟ್ಟಿದ್ದರು. ಮೈಸೂರಿನ ಸುತ್ತೂರಿಗೆ ನರೇಂದ್ರ ಮೋದಿಯವರು ಬಂದಿದ್ದಾಗ 'ಅವರಿಗೆ ಜೇಬು ಇದೆ; ಆದರೆ ತುಂಬುವ ಮನಸಿಲ್ಲ' ಎಂದು ಮುಕ್ತಕಂಠದಿಂದ ಹೊಗಳಿದ್ದರು ಶ್ರೀಗಳು! ಬಹುಶಃ ರಾಜಕಾರಣಿಯೊಬ್ಬರನ್ನು ಇಷ್ಟು ಉದಾರವಾಗಿ ಅವರು ಗುಣಗಾನ ಮಾಡಿದ್ದನ್ನು ನಾನಂತೂ ಒಮ್ಮೆ ಮಾತ್ರ ಕೇಳಿದ್ದು! ಹಾಗಂತ ಅವರು ಯಾರದ್ದಾದರೂ ಅವಗುಣಗಳನ್ನು ಎತ್ತಿ ಆಡುತ್ತಿದ್ದರಾ ಅಂದರೆ ಅದೂ ನನಗೆಂದಿಗೂ ಗಮನಕ್ಕೆ ಬರಲಿಲ್ಲ. ದರೋಡೆಕೋರನನ್ನೇ ಅವರೆದುರಿಗೆ ನಿಲ್ಲಿಸಿದರೂ ಅವನೊಳಗೆ ಒಂದು ಒಳ್ಳೆಯ ಗುಣವನ್ನು ಹೆಕ್ಕಿ ತೆಗೆದು ಕೊಂಡಾಡುತ್ತಿದ್ದರು. ಶಾರದಾ ಮಾತೆ ಹೇಳುತ್ತಿದ್ದರಲ್ಲ 'ಯಾರಲ್ಲಿಯೂ ದೋಷಗಳನ್ನು ಕಾಣಬೇಡ' ಅಂತ. ಅದನ್ನು ಅನೇಕರು ಭಾಷಣಗಳಲ್ಲಿ ಉಲ್ಲೇಖ ಮಾಡುತ್ತಾರೆ. ಹಾಗೆ ಬದುಕಿದ್ದವರು ಮಾತ್ರ ಸಿದ್ದೇಶ್ವರ ಸ್ವಾಮಿಗಳೇ.
ಒಮ್ಮೆ ಸ್ವಾಮಿಗಳೊಬ್ಬರು ನೆರೆದಿದ್ದ ಅಪಾರ ಜನರನ್ನುದ್ದೇಶಿಸಿ ಮಾತನಾಡುತ್ತಾ ತಮ್ಮ ವಿದೇಶ ಪ್ರವಾಸಗಳ ಅನುಭವ ಕೊಚ್ಚಿಕೊಳ್ಳುತ್ತಿದ್ದರು. ಸಿದ್ದೇಶ್ವರ ಸ್ವಾಮಿಗಳಂತಹ ಅನುಭಾವಿಗಳ ಮುಂದೆ ಈ ವರ್ಣನೆ ಕೇಳಲು ನಿಜಕ್ಕೂ ತ್ರಾಸದಾಯಕವೇ ಆಗಿತ್ತು. ಮುಂದೆ ಇವರನ್ನು ಸಿದ್ದೇಶ್ವರ ಸ್ವಾಮಿಗಳೆದುರು ಭೇಟಿಯಾದಾಗ ಅವರನ್ನು ಪರಿಚಯಿಸುತ್ತ, 'ಇವರು ಜಗತ್ತೆಲ್ಲ ಸುತ್ತಾಡಿರುವ ಮಹಾತ್ಮರು. ದೇಶ ನೋಡು ಕೋಶ ಓದು ಅಂತಾರಲ್ಲ ಹಾಗೇ ಇವರು ಜಗತ್ತು ನೋಡಿದ್ದಾರೆ, ಅಧ್ಯಯನ ಮಾಡಿದ್ದಾರೆ' ಎಂದರು. ಅವರ ವ್ಯಕ್ತಿತ್ವವೇ ಹಾಗೇ. ಯಾರನ್ನೂ ಯಾವಾಗಲೂ ನೋಯಿಸಿದವರಲ್ಲ. ಆತ್ಮವಿಶ್ವಾಸವನ್ನು ತುಂಬುವಂತಹ, ಅದನ್ನು ಹೆಚ್ಚಿಸುವಂತಹ ಗಣಿ ಅವರು.
ಅವರನ್ನು ಭೇಟಿಯಾದಾಗಲೆಲ್ಲ ಸುದೀರ್ಘಕಾಲ ಅವರೊಂದಿಗೆ ನಡಿಗೆಯಲ್ಲಿ ಸೇರಿಕೊಳ್ಳುವ ಅವಕಾಶ ನನಗೆ ಸಿಗುತ್ತಿತ್ತು. ಒಮ್ಮೆಯೂ ಅವರು ತಮ್ಮ ಪ್ರವಚನದ ಕುರಿತು ಅದರ ವಿಷಯ ವಸ್ತುವಿನ ಕುರಿತು ರ್ಚಚಿಸಿದ್ದು ಕೇಳಿಲ್ಲ. ನಡಿಗೆಯುದ್ದಕ್ಕೂ ರಾಷ್ಟ್ರದ ಪ್ರಸ್ತುತ ಪರಿಸ್ಥಿತಿಯ ಕುರಿತು ಅವರ ಪ್ರಶ್ನೆಗಳು ಇರುತ್ತಿದ್ದವು. ಸಾಂಸ್ಕೃತಿಕ ಆಕ್ರಮಣವಿರಲಿ, ಪ್ರತ್ಯಕ್ಷ ಯುದ್ಧವೇ ಇರಲಿ ಕೂಲಂಕಷವಾಗಿ ವಿಚಾರ ಮಾಡುತ್ತಿದ್ದರು. ಭಾಷೆಯ ಸಮಸ್ಯೆಯಿರಲಿ, ಜನಸಂಖ್ಯೆ ಸ್ಫೋಟ ವಿಚಾರವೇ ಇರಲಿ ಅವರು ಆಳಕ್ಕಿಳಿದು ರ್ಚಚಿಸುತ್ತಿದ್ದರು. ಅವರ ಅಂತರ್ದೃಷ್ಟಿ ಅದೆಷ್ಟು ಸೂಕ್ಷ್ಮವಾಗಿರುತ್ತಿತ್ತೆಂದರೆ ಅದುವರೆಗೆ ನಾವು ನಂಬಿದ ಸತ್ಯವನ್ನು ತರ್ಕಬದ್ಧವಾಗಿಯೇ ಸುಳ್ಳೆನಿಸುವಂತೆ ಮಾಡುತ್ತಿದ್ದರು. ಅವರೆಂದಿಗೂ ವಾದ ಮಾಡುತ್ತಿರಲಿಲ್ಲ, ಆದರೆ, ಸೂಕ್ಷ್ಮವಾಗಿ ಅರ್ಥವಾಗುವಂತೆ ಹೇಳುತ್ತಿದ್ದರು. ನನಗೆ ಚೆನ್ನಾಗಿ ನೆನಪಿದೆ. ನಮ್ಮೆಲ್ಲ ಸುದೀರ್ಘ ಪ್ರಯಾಸದ ನಂತರವೂ ಸಮಾಜದಲ್ಲಿ ಬದಲಾವಣೆ ಕಾಣುತ್ತಿಲ್ಲ. ಹೀಗಾಗಿ, ಈ ಪ್ರಯಾಸಗಳೆಲ್ಲ ವ್ಯರ್ಥ ಎಂಬ ಮನದಾಳದ ಭಾವನೆಯನ್ನು ಅವರೆದುರು ವ್ಯಕ್ತಪಡಿಸಿದೆ. ಅವರು ಗಂಭೀರವದನರಾಗಿ 'ಇಂದು ನಾವು ಮಾಡುವ ಪ್ರಯತ್ನಕ್ಕೆ ಒಂದು ಪೀಳಿಗೆಯ ನಂತರ ಪರಿಹಾರ ಸಿಗುವುದೆಂಬ ಭರವಸೆ ಇಡಬೇಕು. ಆಗ ಮಾತ್ರ ಕೆಲಸ ಮಾಡಬಹುದು' ಎಂದರು. ನಾವು ಆರಂಭಿಸಿದ ಕೆಲಸ 25 ವರ್ಷಗಳ ನಂತರ ಫಲ ಕೊಡುವುದೆಂಬ ವಿಶ್ವಾಸವಿಟ್ಟು ಮುನ್ನುಗ್ಗಬೇಕೆಂಬುದು ಅವರ ಕಿವಿಮಾತಾಗಿತ್ತು. ಸಮಾಜದ ಕೆಲಸ ಮಾಡುವ ಪ್ರತಿಯೊಬ್ಬನೂ ಇಷ್ಟು ತಾಳ್ಮೆಯಿಂದ, ಸಾವಧಾನವಾಗಿ ಕಾದರೆ ಬದಲಾವಣೆ ಶತಃಸಿದ್ಧ. ಸ್ವತಃ ಸ್ವಾಮೀಜಿಯವರು 'ಈ ಜನ ಸುಮ್ಮಸುಮ್ಮನೆ ಬರುತ್ತಿಲ್ಲ. 20 ವರ್ಷ ಚೆನ್ನಾಗಿ ಪರೀಕ್ಷಿಸಿ ಅಕ್ಕಿ ಬೆಂದಿದೆ ಎಂದು ಖಾತ್ರಿಯಾದ ಮೇಲೆಯೇ ಬರುತ್ತಿರೋದು' ಎಂದು ಪ್ರವಚನಕ್ಕೆ ಬರುವ ಜನರ ಕುರಿತಂತೆ ಹೇಳುತ್ತಿದ್ದರಂತೆ!
ಅವರ ದಿನಚರಿಯೇ ವಿಶಿಷ್ಟವಾದದ್ದು. ಅತಿ ಕಡಿಮೆ ನಿದ್ದೆ. ಬೆಳಗ್ಗೆ ಬಲುಬೇಗ ಪ್ರವಚನ ಕಾರ್ಯಕ್ರಮ. ಅದು ಮುಗಿದೊಡನೆ ಬೆವರುವಷ್ಟು ನಡಿಗೆ. ಅಲ್ಪ ಪ್ರಸಾದ. ಅಧ್ಯಯನ-ಪಾಠ- ಸಂಜೆಯಾದೊಡನೆ ಮತ್ತಷ್ಟು ನಡಿಗೆ. ಊರಿನ ಗಣ್ಯರನ್ನು, ತಿಳಕೊಂಡವರನ್ನು ಕೂರಿಸಿಕೊಂಡು ವಿಚಾರ ವಿನಿಮಯ. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದುದು ಬಲುಕಡಿಮೆಯೇ. ಉಳಿದವರನ್ನು ಮಾತನಾಡಿಸಿ ಸದ್ಯದ ಆಗು-ಹೋಗುಗಳನ್ನು ತಿಳಿದುಕೊಳ್ಳುತ್ತಿದ್ದರು. ಅವರದ್ದು ಸದ್ದಿಲ್ಲದ ಸಾಧನೆ. ಜೇನುಗೂಡಿನೊಳಗೆ ಶೇಖರಿಸಿಟ್ಟಿರಬಹುದಾದ ಜೇನಿನ ಪ್ರಮಾಣ ಗೊತ್ತಾಗೋದು ಸುಲಭವಲ್ಲ. ಹಾಗೆಯೇ ಅವರ ಬದುಕು ಕೂಡ.
ಎಲ್ಲಿ ಹೋದರೂ, ಯಾರೊಂದಿಗೆ ಕೆಲಕಾಲ ಕಳೆದರೂ ಅವರು ಆಪ್ತರಾಗಿಬಿಡುತ್ತಿದ್ದರು. ಸರಳತೆಗೆ ಮತ್ತು ಪ್ರೇಮಕ್ಕಿರುವ ಶ್ರೇಷ್ಠ ಶಕ್ತಿ ಅದು. ಕೊಡಗಿನ ಒಂದು ಪುಟ್ಟ ಹಳ್ಳಿ ಪೊನ್ನಂಪೇಟೆ. ಅಲ್ಲಿ ಒಂದು ಮನೆಯಲ್ಲಿ ಇವರಿಗೆ ವಾಸ್ತವ್ಯಕ್ಕೆ ಅಣಿಗೊಳಿಸಲಾಗಿತ್ತು. ಮನೆಯವರಿಗೆ ಇವರ ಪರಿಚಯವಿಲ್ಲವಾದ್ದರಿಂದ ಇತರೆಲ್ಲ ಸಾಧುಗಳಂತೆ ಇವರನ್ನೂ ಗಣಿಸಿ ಸುಮ್ಮನಾದರು. ಇವರ ಆಗಮನಕ್ಕೆ ಮುನ್ನ ಮನೆ ವೀಕ್ಷಣೆಗೆ ಬಂದ ಠಾಕುಠೀಕಿನ ಸ್ವಾಮಿಗಳನ್ನೇ ಸಿದ್ದೇಶ್ವರ ಸ್ವಾಮಿಗಳೆಂದು ಅವರು ಭಾವಿಸಿದ್ದರಂತೆ. ಆನಂತರ ಸರಳವಾಗಿ ಬಿಳಿಯುಡುಪಿನಲ್ಲಿ ಬಂದ ಸಾಧುಗಳು ಮನೆಯವರೆಲ್ಲರ ಮನಸೂರೆಗೊಂಡರು. ತಾವು ಸ್ವಲ್ಪವೇ ಊಟ ಮಾಡುತ್ತಿದ್ದರು. ಆದರೆ, ಮನೆಯವರು ಊಟಕ್ಕೆ ಕುಳಿತಾಗ ತಾವೇ ಬಂದು ಅವರಿಗೆ ಪ್ರೀತಿಯಿಂದ ಬಡಿಸುತ್ತಿದ್ದರು, ಹೊಟ್ಟೆ ತುಂಬಿ ಇನ್ನು ಸಾಧ್ಯವಿಲ್ಲ ಎನ್ನುವಷ್ಟು! ಅವರ ಆ ಎರಡು ದಿನಗಳ ಅವಧಿಯ ವಾಸ್ತವ್ಯವನ್ನು ಆ ಮನೆಮಂದಿ ಇಂದಿಗೂ ಮರೆತಿಲ್ಲ. ಪ್ರತಿಯೊಬ್ಬರಿಗೂ ನಾನಂದ್ರೆ ಅವರಿಗೆ ಬಹಳ ಇಷ್ಟ ಎನಿಸುತ್ತಿತ್ತು. ಅಷ್ಟರಮಟ್ಟಿಗೆ ಅವರು ಎಲ್ಲರನ್ನೂ ಸಮದರ್ಶಿಯಾಗಿ ಪ್ರೀತಿಸುತ್ತಿದ್ದರು. ಅವರ ಭರಪೂರ ಪ್ರೇಮದ ಪ್ರವಾಹ ಅನುಭವಕ್ಕೆ ಬರುತ್ತಿದ್ದುದು ಊಟ ಬಡಿಸುವ ಹೊತ್ತಲ್ಲಿ. ಅಪರೂಪಕ್ಕೊಮ್ಮೆ ಅವರು ಊಟ ನೀಡಲು ಬರುತ್ತಿದ್ದರು. ಅಂದು ದೇವರೇ ಕಾಪಾಡಬೇಕಾಗುತ್ತಿತ್ತು. ಯಾರೇ ಬಂದರೂ ಪ್ರಸಾದ ಸ್ವೀಕರಿಸದೇ ಹೋಗಲು ಬಿಡುತ್ತಿರಲಿಲ್ಲ ಅವರು. ಅಷ್ಟೇ ಏಕೆ? ಪ್ರವಚನಗಳಿಗೆ ಪರ ಊರುಗಳಿಗೆ ಹೋಗುತ್ತಿದ್ದರಲ್ಲ; ಯಾರಿಂದಲೂ ಬಿಡಿಗಾಸು ಕೇಳುತ್ತಿರಲಿಲ್ಲ. ಆದರೆ, ಬಂದವರಿಗೆ ದಾಸೋಹದ ವ್ಯವಸ್ಥೆ ಮಾಡಿ ಎನ್ನುತ್ತಿದ್ದರು. ನಾವೆಲ್ಲ ಬುದ್ಧನ ಸಂಸಾರದ ಕುರಿತು ಕೇಳಿದ್ದೇವೆ. ಅವನೊಂದಿಗೆ ಬರುತ್ತಿದ್ದ ಬೈರಾಗಿಗಳ ದಂಡಿನ ಬಗ್ಗೆ ಓದಿದ್ದೇವೆ. ನಮ್ಮ ಕಾಲದಲ್ಲಿ ಸಿದ್ದೇಶ್ವರ ಸ್ವಾಮಿಗಳ ರೂಪದಲ್ಲಿ ಅದನ್ನು ನೋಡಿದೆವು ಅಷ್ಟೇ. ಅವರು ನಮ್ಮ ಕಾಲದ ಬುದ್ಧನಂತೆ ಬದುಕಿದರು!
ಅವರು ದೇಹದೊಳಗೆ ಅನಾರೋಗ್ಯದ ವೇದನೆಯನ್ನು ಅಡಗಿಸಿಟ್ಟುಕೊಂಡೇ ಸುದೀರ್ಘಕಾಲ ಬದುಕಿದರು. ಅದೊಮ್ಮೆ ಜಾರಿಬಿದ್ದು ಕಾಲ ಮೂಳೆ ಮುರಕೊಂಡಾಗಲೇ ಅವರಿಗೆ ದೇಹದೊಳಗೆ ಬೇರೆಯ ನೋವೂ ಇದೆ ಅಂತ ಗೊತ್ತಾಗಿದ್ದು! ಆದರೂ ಸ್ವಲ್ಪ ಚೇತರಿಸಿಕೊಂಡೊಡನೆ ಪ್ರವಚನಕ್ಕೆ ಅಣಿಯಾಗುತ್ತಿದ್ದರು. ವಿಜಯಪುರದ ಕಾಖಂಡಕಿಯಲ್ಲಿ ಅವರ ಕೊನೆಯ ಪ್ರವಚನ. ಅವರನ್ನು ಭೇಟಿ ಮಾಡಿದಾಗ ತಮ್ಮೊಳಗಿನ ನೋವಿನ ಕುರಿತು ಅವರು ಮಾತನಾಡಲಿಲ್ಲ. ರಾಷ್ಟ್ರದ ನೋವುಗಳ ಕುರಿತಂತೆ ಸುದೀರ್ಘವಾಗಿ ರ್ಚಚಿಸಿದರು. ಅಲ್ಲಿಂದ ಮುಂದೆ ಅವರು ಜ್ಞಾನಯೋಗಾಶ್ರಮಕ್ಕೆ ಬಂದು ಅನಾರೋಗ್ಯದಿಂದ ನೆಲೆ ನಿಂತಾಗಲೇ ನಮ್ಮಲ್ಲನೇಕರಿಗೆ ಅವರ ಸಂಕಟಗಳ ಕುರಿತಂತೆ ಅರಿವಾಗಿದ್ದು.
ದೇಹತ್ಯಾಗದ 8 ದಿನ ಮುಂಚೆ ಅವರನ್ನು ಭೇಟಿ ಮಾಡಿದಾಗ ಮುಖದಲ್ಲಿ ನೋವಿನ ಲವಲೇಶವೂ ಇರಲಿಲ್ಲ. 'ಮುಖ ನಮ್ಮೊಳಗಿನ ಭಾವನೆಯನ್ನು ಪ್ರತಿಬಿಂಬಿಸುತ್ತದೆ' ಎಂಬ ಇಂಗ್ಲಿಷ್ ನಾಣ್ಣುಡಿಯನ್ನು ನೆನಪಿಸಿ ನಿಮ್ಮ ಮುಖದಲ್ಲಿ ನೋವಿನ ಲಕ್ಷಣವೇ ಇಲ್ಲವಲ್ಲವೆಂದು ನಕ್ಕೆ. ಅವರೂ ಜೋರಾಗಿಯೇ ನಕ್ಕರು. ಸ್ವಲ್ಪ ಹೊತ್ತು ಮಾತನಾಡಿದರು. ದೇಹತ್ಯಾಗದ ಎರಡು ದಿನ ಮುಂಚೆಯೂ ಅವರನ್ನೊಮ್ಮೆ ನೋಡಿದೆ. ಈ ಬಾರಿ ಅವರು ಗುರುತಿಸುವ ಮಟ್ಟದಲ್ಲಿರಲಿಲ್ಲ. ಅವರ ದೈವತ್ವವನ್ನು ಗುರುತು ಹಿಡಿಯುವ ಯೋಗವನ್ನು ಭಗವಂತ ನಮಗೆ ಕೊಟ್ಟನಲ್ಲ ಎಂಬುದು ನಮ್ಮ ಭಾಗ್ಯ ಅಷ್ಟೇ.
ಸಮಾಧಿ ಕಟ್ಟಿ ಸಂಭ್ರಮಿಸಬೇಡಿ, ದೇಹವನ್ನು ಬೆಂಕಿಗೆ ಆಹುತಿಯಾಗಿಸಿ ಎಂದು ಮೊದಲೇ ಬರೆದಿಟ್ಟಿದ್ದರು! ಅವರ ಅಂತಿಮ ದರ್ಶನಕ್ಕೆ ಬಂದ ಜನರ ಲೆಕ್ಕ ಹಾಕುವುದು ಅಸಾಧ್ಯವೇ ಆಗಿತ್ತು. ಶರಣರ ಬದುಕು ಅವರ ಮರಣದಲ್ಲಿಯೇ ಗೊತ್ತಾಗೋದು ಅಂತ ಹೇಳಿದ್ದು ಸುಳ್ಳಲ್ಲ. ಆದರೆ, ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಬದುಕು ಇದ್ದಾಗಲೂ ಗೊತ್ತಾಗಿತ್ತು, ದೇಹತ್ಯಾಗವಾದ ಮೇಲೆ ಎಲ್ಲೆಡೆ ಪಸರಿಸಿತ್ತು, ಅಷ್ಟೇ!
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)