ಗಣಿನಾಡಿಗೆ ಸಂಜೆ ರಾಹುಲ್ ಯಾತ್ರೆ ಪ್ರವೇಶ
ಕೋಟೆನಾಡು ಚಿತ್ರದುರ್ಗದಲ್ಲಿ ಭಾರತ್ ಜೋಡೊ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ, ಜನರತ್ತ ಕೈಬೀಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ.
ಬೆಂಗಳೂರು,ಅ.೧೪- ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ೧೩ನೇ ದಿನಕ್ಕೆ ಕಾಲಿಟ್ಟಿದ್ದು. ಯಾತ್ರೆ ಇಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರ್ ತಾಲ್ಲೂಕಿನ ರಾಮಪುರದಿಂದ ಪುನಾರಂಭಗೊಂಡಿದೆ.
ಇಂದು ಬೆಳಿಗ್ಗೆ ೬.೩೦ಕ್ಕೆ ಸರಿಯಾಗಿ ರಾಹುಲ್‌ಗಾಂಧಿ ಅವರು ರಾಮಪುರದಿಂದ ಪುನಾರಂಭಿಸಿದ್ದು, ರಾಮಪುರದಿಂದ ೧೩ ಕಿ.ಮೀ ದೂರದಲ್ಲಿರುವ ಜಾಜಿರಕಲ್ಲು ಟೋಲ್‌ಪ್ಲಾಜಾ ತಲುಪಿದ್ದು, ಅಲ್ಲಿಯೇ ಪಾದಯಾತ್ರಿಗಳು ಉಪಾಹಾರ ಸೇವಿಸಿ ವಿಶ್ರಾಂತಿ ಪಡೆದಿದ್ದು, ಸಂಜೆ ೪.೩೦ಕ್ಕೆ ಮತ್ತೆ ಇಲ್ಲಿ ಇಂದು ಪಾದಯಾತ್ರೆ ಮುಂದುವರೆಯಲಿದ್ದು, ಸಂಜೆ ಬಳ್ಳಾರಿ ಪ್ರವೇಶಿಸಲಿದೆ. ಇಂದು ರಾತ್ರಿ ಬಳ್ಳಾರಿಯ ಅಲಕುಂದಿ ಮಠದ ಬಳಿ ಪಾದಯಾತ್ರಿಗಳು ವಾಸ್ತವ್ಯ ಹೂಡುವರು.
ಭಾರತ್ ಜೋಡೋ ಯಾತ್ರೆಯಲ್ಲಿ ಉತ್ಸಾಹ ಹುರುಪಿನಿಂದ ರಾಹುಲ್‌ಗಾಂಧಿ ಅವರು ಹೆಜ್ಜೆ ಹಾಕುತ್ತಿದ್ದು, ಅವರ ಜತೆ ನೂರಾರು ಕೈ ಕಾರ್ಯಕರ್ತರೂ ಸಹ ಉತ್ಸಾಹ ಹುರುಪಿನಿಂದ ಹೆಜ್ಜೆ ಹಾಕಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕಿ ಸೌಮ್ಯಾರೆಡ್ಡಿ ಸೇರಿದಂತೆ ಹಲವು ಮುಖಂಡರು ಪಾದಯಾತ್ರೆಯಲ್ಲಿ ಭಾಗಿಯಾದರು.
ಭಾರತ್ ಜೋಡೋ ಯಾತ್ರೆ ಸಾಗಿದ ಹಳ್ಳಿಗಳಲ್ಲಿ ಜನ ಗುಂಪುಗೂಡಿ ರಾಹುಲ್‌ಗಾಂಧಿ ಅವರತ್ತ ಕೈಬೀಸುತ್ತಿದ್ದು ವಿಶೇಷವಾಗಿತ್ತು. ಹಾಗೆಯೇ ಹಲವೆಡೆ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿಯೂ ಜನ ನಿಂತು ರಾಹುಲ್‌ಗಾಂಧಿ ಅವರಿಗೆ ಕೈ ಬೀಸಿ ಸಂತಸಪಟ್ಟರು. ಹಲವೆಡೆ ರಾಹುಲ್‌ಗಾಂಧಿ ಪರ ಜೈಕಾರದ ಘೋಷಣೆಗಳು ಮೊಳಗಿದವು.
ಬಳ್ಳಾರಿಯಲ್ಲಿ ನಾಳೆ ಬೃಹತ್ ಸಮಾವೇಶ
ನಾಳೆ ರಾಹುಲ್‌ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಇಂದು ಬಳ್ಳಾರಿ ಪ್ರವೇಶಿಸಲಿದ್ದು, ನಾಳೆ ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಬೃಹತ್ ಸಮಾವೇಶ ನಡೆಯಲಿದೆ. ಈ ಹಿಂದೆ ೨೦೧೨ರಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯರವರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬಳ್ಳಾರಿಗೆ ಪಾದಯಾತ್ರೆ ಮಾಡಿ, ೨೦೧೩ರಲ್ಲಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಈಗ ಮತ್ತೆ ಕಾಂಗ್ರೆಸ್ ನಾಯಕರು ರಾಹುಲ್‌ಗಾಂಧಿ ಅವರ ನೇತೃತ್ವದಲ್ಲಿ ಭರ್ಜರಿ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದು, ನಾಳಿನ ಸಮಾವೇಶಕ್ಕೆ ನಾಲ್ಕೈದು ಜನರನ್ನು ಸೇರಿಸಿ ಕಾಂಗ್ರೆಸ್‌ನ ಶಕ್ತಿಪ್ರದರ್ಶನಕ್ಕೆ ಎಲ್ಲ ಸಿದ್ಧತೆಗಳನ್ನು ಕಾಂಗ್ರೆಸ್ ನಾಯಕರು ನಡೆಸಿದ್ದಾರೆ.