ಗಡಿ ಕನ್ನಡಿಗರಿಗೆ ಶಿಂಧೆ ಸರ್ಕಾರ ಬೆದರಿಕೆ- 11 ತಾಲೂಕಿನ ಗ್ರಾ.ಪಂಚಾಯ್ತಿ ವಿಸರ್ಜನೆ ಎಚ್ಚರಿಕೆ

ವಿಜಯಪುರ: ಮಹರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಕನ್ನಡಿಗರಿಗೆ ಮಹಾ ಸರ್ಕಾರ ಬೆದರಿಕೆ ಹಾಕಿದೆ. ಕರ್ನಾಟಕ ಸೇರಲು ನಿರ್ಧಾರ ಮಾಡಿರೋ ಕನ್ನಡಿಗರಿಗೆ ಮಹಾ ಸರ್ಕಾರ ಕರ್ನಾಟಕ ಸೇರದಂತೆ ತಾಕೀತು ಮಾಡಿದೆ.
ಕರ್ನಾಟಕ ಸೇರೋ ನಿರ್ಧಾರ ಮಾಡಿರೋ ಗ್ರಾಮಗಳ ಗ್ರಾಮ ಪಂಚಾಯ್ತಿ ವಿಸರ್ಜನೆ ಮಾಡೋದಾಗಿ ಮಹಾಸರ್ಕಾರ ಬೆದರಿಕೆ ಹಾಕಿದೆ. ಅಕ್ಕಲಕೋಟ ತಾಲೂಕಿನ 11 ಗ್ರಾಮ ಪಂಚಾಯತಿಗಳನ್ನು ವಿಸರ್ಜನೆ ಮಾಡಲು ಮಹಾ ಸರ್ಕಾರ ಮುಂದಾಗಿದೆ. ಈ ಮೂಲಕ ಉದ್ಧಟತನ ಮೆರೆಯುತ್ತಿರೋ ಮಹಾರಾಷ್ಟ್ರ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಮಹಾ ಕನ್ನಡಿಗರು ರೆಡಿ ಆಗಿದ್ದಾರೆ.
ಕರ್ನಾಟಕಕ್ಕೆ ಸೇರಲು ಠರಾವು ಪಾಸ್ ಮಾಡಿರುವ ಗಾ.್ರಪಂ ವಿಸರ್ಜನೆ ಹಾಗೂ ಗ್ರಾಮ ಅಧಿಕಾರಗಳನ್ನು ಸೇವೆಯಿಂದ ತೆಗೆದು ಹಾಕೋ ಬೆದರಿಕೆ ಹಾಕಲಾಗಿದೆ. ಗಲ್ಲು ಶಿಕ್ಷೆ ನೀಡಿದರೂ ನಾವು ಯಾವುದಕ್ಕೂ ಹೆದರಲ್ಲಾ ಗಡಿನಾಡ ಕನ್ನಡಿಗರು ಸೆಡ್ಡು ಹೊಡೆದಿದ್ದಾರೆ. 2002 ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 22 ಗ್ರಾಮಗಳ ಜನರು ಮಹಾರಾಷ್ಟ್ರಕ್ಕೆ ಸೇರಲು ನಿರ್ಧಾರ ಮಾಡಿದ್ದರು. ಅಗತ್ಯ ಮೂಲಭೂತ ಸೌಕರ್ಯ ನೀಡಿ ಇಲ್ಲವೇ ಮಹಾರಾಷ್ಟ್ರಕ್ಕೆ ಸೇರುತ್ತೇವೆಂದು ತೀರ್ಮಾಣ ಮಾಡಿದ್ದರು.
ಆಗಿನ ಕರ್ನಾಟಕ ಸಿಎಂ ಆಗಿದ್ದ ಎಸ್.ಎಂ ಕೃಷ್ಣ 204 ಕೋಟಿ ರೂಪಾಯಿ ಆ ಭಾಗಕ್ಕೆ ಅನುದಾನ ನೀಡಿದ್ದರು. ಆ ಮಾದರಿಯಲ್ಲೇ ಮಹಾರಾಷ್ಟ್ರ ಸರ್ಕಾರ ನಮಗೆ ಅನುದಾನ ನೀಡಿ ಎಲ್ಲಾ ಸೌಕರ್ಯ ನೀಡಲಿ ಎಂದು ಅಕ್ಕಲಕೋಟ ಜನರು ಒತ್ತಾಯಿಸಿದ್ದಾರೆ. ಅನುದಾನ ಹಾಗೂ ಇತರೆ ಸೌಕರ್ಯ ನೀಡಿ ಇಲ್ಲವೇ ಕರ್ನಾಟಕಕ್ಕೆ ಸೇರಲು ಅನುಮತಿ ನೀಡಿ ಎಂದು ಜನರು ಒತ್ತಾಯ ಮಾಡಿದ್ದಾರೆ.