ಕಾಂಗ್ರೆಸ್ ಬಾಗಿಲು ಮುಕ್ತವಾಗಿದೆ, ನಮ್ಮಿಂದ ದೂರವಾದವರಿಗೂ ಸ್ವಾಗತವಿದೆ: ಡಿ.ಕೆ.ಶಿವಕುಮಾರ್

ಕಾಂಗ್ರೆಸ್ ಬಾಗಿಲು ಮುಕ್ತವಾಗಿದೆ, ನಮ್ಮಿಂದ ದೂರವಾದವರಿಗೂ ಸ್ವಾಗತವಿದೆ: ಡಿ.ಕೆ.ಶಿವಕುಮಾರ್

ಬೆಳಗಾವಿ, ಡಿಸೆಂಬರ್‌ 28: ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇದೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಭರಪೂರ ಸಿದ್ದತೆ ನಡೆಸಿವೆ. ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು ಈ ಬಾರಿ ತನ್ನ ಅದೃಷ್ಟ ಪರೀಕ್ಷಿಸಲಿದೆ.ಪ್ರಧಾನಿ ಮೋದಿ ವರ್ಚಸ್ಸು ಹಾಗೂ ಹಿಂದುತ್ವದ ಮೇಲೆ ಬಿಜೆಪಿ ಅವಲಂಬಿತವಾಗಿದೆ. ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಮೈಸೂರು ಭಾಗದಲ್ಲಿ ಮತ್ತೆ ಪ್ರಾಬಲ್ಯ ಹೊಂದಲು ಜೆಡಿಎಸ್‌ ಕಸರತ್ತು ನಡೆಸಿದೆ.

ಇದೇ ವೇಳೆ, ಬೇರೆ ಪಕ್ಷದಲ್ಲಿ ಇರುವವರು ಕಾಂಗ್ರೆಸ್‌ಗೆ ಬರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ.

ಈ ವಿಚಾರದ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಕರ್ನಾಟಕದಲ್ಲಿ ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಸೇರುವುದಾಗಿ ಹೇಳುತ್ತಿದ್ದಾರೆ. ಬೇರೆ ಪಕ್ಷಗಳಲ್ಲಿರುವ ಹಳಬರು ಸೇರಿದಂತೆ ಹೊಸಬರು ಕಾಂಗ್ರೆಸ್‌ಗೆ ಬರಲು ಸಿದ್ಧತೆ ನಡೆಸಿದ್ದಾರೆ. ಎಲ್ಲರಿಗೂ ಕಾಂಗ್ರೆಸ್‌ನ ಬಾಗಿಲು ಮುಕ್ತವಾಗಿದೆ. ನಮ್ಮಿಂದ ದೂರವಾದವರು, ನಮ್ಮ ಜೊತೆ ವೈಮನಸ್ಸು ಹೊಂದಿ ಬೇರೆ ಪಕ್ಷಗಳಿಗೆ ಹೋದವರಿಗೆ ನಾವು ಸ್ವಾಗತಿಸುತ್ತೇವೆ' ಎಂದು ಹೇಳಿದ್ದಾರೆ.

'ಬೇರೆ ಪಕ್ಷಗಳ ಮುಖಂಡರು ನನಗೆ ಕರೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸೇರುವುದಾಗಿ ಹೇಳುತ್ತಿದ್ದಾರೆ. ಬೆಳಗಾವಿಯಲ್ಲಿನ ವಿಧಾನಸಭೆ ಅಧಿವೇಶನ ಮುಗಿದ ನಂತರ ಎಲ್ಲರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು' ಎಂದು ಡಿಕೆಶಿ ತಿಳಿಸಿದ್ದಾರೆ.