PAYCM ಆಯ್ತು SAYCM ಅಭಿಯಾನ ಆರಂಭಿಸಿದ ಕಾಂಗ್ರೆಸ್

ಬೆಂಗಳೂರು,ಅ.19- ಪೇ ಸಿಎಂ ಅಭಿಯಾನದ ಮೂಲಕ ಸಾಕಷ್ಟು ಕಿರಿಕಿರಿ ಮಾಡಿದ ಕಾಂಗ್ರೆಸ್ ಈಗ ಸೇ ಸಿಎಂ ಅಭಿಯಾನದ ಮೂಲಕ ಮತ್ತಷ್ಟು ಮುಜುಗರ ಉಂಟು ಮಾಡಲು ಶುರು ಮಾಡಿದೆ. ನಿನ್ನೆಯಿಂದ ಸೇ ಸಿಎಂ ಅಭಿಯಾನ ಆರಂಭವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
ಬಿಜೆಪಿ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ತಾವು ಸರ್ಕಾರಿ ಯೋಜನೆಗಳಲ್ಲಿ ಪಡೆದ ಕಮಿಷನ್‍ನಷ್ಟು ಪ್ರಮಾಣದಲ್ಲಿ ಈಡೇರಿಸಿದ್ದರೂ ಸಾಕಿತ್ತು ಎಂದು ಲೇವಡಿ ಮಾಡಿದೆ.2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 613 ಭರವಸೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ನೀಡಿತ್ತು. ಅದರಲ್ಲಿ ಶೇ.10ರಷ್ಟನ್ನೂ ಕೂಡ ಈಡೇರಿಸಿಲ್ಲ.
ಇನ್ನು ಶೇ.90ರಷ್ಟು ಭರವಸೆಗಳು ಹುಸಿಯಾಗೇ ಉಳಿದಿವೆ. ಸರ್ಕಾರದ ಯೋಜನೆಗಳಲ್ಲಿ ಬಿಜೆಪಿ ಶೇ.40ರಷ್ಟು ಕಮಿಷನ್ ಪಡೆಯುತ್ತಿದೆ. ಇಷ್ಟು ಪ್ರಮಾಣದ ಭರವಸೆಗಳನ್ನಾದರೂ ಈಡೇರಿಸಬೇಕಿತ್ತು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಅಭಿವೃದ್ಧಿಯಲ್ಲಿ ಕುರುಡಾಗಿರುವ ಸರ್ಕಾರ ಪ್ರಶ್ನೆಗಳಿಗೆ ಕಿವುಡುತನ ಅನುಸರಿಸುತ್ತಿದೆ. ಸಂಪುಟದ ಸಚಿವರು ತಮ್ಮ ಇಲಾಖೆಗಳ ಮಟ್ಟದಲ್ಲಿ ನೀಡಿದ ಭರವಸೆಗಳ ಬಗ್ಗೆ ಮಾತನಾಡುವರೇ, ಮುಖ್ಯಮಂತ್ರಿಯವರು ಪ್ರಶ್ನೆಗಳಿಗೆ ಉತ್ತರಿಸುವೇ ಎಂದು ಸೇ ಸಿಎಂ ಅಭಿಯಾನದಲ್ಲಿ ಪ್ರಶ್ನಿಸಲಾಗಿದೆ.