IPL ಉದ್ಘಾಟನಾ ಪಂದ್ಯ: ಧೋನಿ ಬ್ಯಾಟಿಂಗ್ ವೇಳೆ 'ಜಿಯೊಸಿನಿಮಾ'ಗೆ ಬಂದ 1.6 ಕೋಟಿ ಜನ

IPL ಉದ್ಘಾಟನಾ ಪಂದ್ಯ: ಧೋನಿ ಬ್ಯಾಟಿಂಗ್ ವೇಳೆ 'ಜಿಯೊಸಿನಿಮಾ'ಗೆ ಬಂದ 1.6 ಕೋಟಿ ಜನ

ಹಮದಾಬಾದ್‌: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ನಾಲ್ಕು ವರ್ಷ ಸಮೀಪಿಸುತ್ತಿದೆ. ಆದರೆ, ಅವರ ಕ್ರೇಜ್‌ ಮಾತ್ರ ಕಡಿಮೆಯಾಗಿಲ್ಲ ಎಂಬುದಕ್ಕೆ ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಉದ್ಘಾಟನಾ ಪಂದ್ಯ ಸಾಕ್ಷಿಯಾಯಿತು.

ಐಸಿಸಿಯ ಪ್ರಮುಖ ಮೂರು ಪ್ರಶಸ್ತಿಗಳನ್ನು (ಏಕದಿನ ವಿಶ್ವಕಪ್‌, ಟಿ20 ವಿಶ್ವಕಪ್‌ ಹಾಗೂ ಚಾಂಪಿಯನ್ಸ್‌ ಟ್ರೋಫಿ) ಗೆದ್ದ ಏಕೈಕ ನಾಯಕ ಎನಿಸಿರುವ ಧೋನಿಗೆ ವಿಶ್ವದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ.

ಗುಜರಾತ್‌ ಟೈಟನ್ಸ್‌ ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿ ಅವರು ಬ್ಯಾಟಿಂಗ್‌ ಮಾಡುವ ವೇಳೆ ಬರೋಬ್ಬರಿ 1.6 ಕೋಟಿ ಜನರು 'JioCinema' ಆಯಪ್‌ ಮೂಲಕ ಪಂದ್ಯ ವೀಕ್ಷಿಸಿದ್ದಾರೆ.

ಈ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅವರು, ಕ್ರೀಡಾಂಗಣದಲ್ಲೂ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳನ್ನು ನಿರಾಶೆಗೊಳಿಸಲಿಲ್ಲ. ಕೇವಲ 7 ಎಸೆತಗಳನ್ನು ಎದುರಿಸಿದ ಅವರು, 14 ರನ್‌ ಗಳಿಸಿ ಅಜೇಯವಾಗಿ ಉಳಿದರು. ಜೋಶುವಾ ಲಿಟಲ್ ಎಸೆದ 20ನೇ ಓವರ್‌ನಲ್ಲಿ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್‌ ಸಿಡಿಸಿ ಸಂಚಲನ ಮೂಡಿಸಿದರು.

ಪಂದ್ಯ ನಡೆದ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣ ಗುಜರಾತ್‌ ಟೈಟನ್ಸ್‌ ತಂಡದ ತವರು ಮೈದಾನವಾದರೂ, ಪ್ರೇಕ್ಷಕರಿಂದ 'ಧೋನಿ, ಧೋನಿ' ಕೂಗು ಮುಗಿಲು ಮುಟ್ಟಿತು.

ಗುಜರಾತ್ ಶುಭಾರಂಭ
ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಗುಜರಾತ್ ಟೈಟನ್ಸ್‌ ಶುಭಾರಂಭ ಮಾಡಿದೆ. ಪಂದ್ಯದಲ್ಲಿ, ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಚೆನ್ನೈ, ಆರಂಭಿಕ ಬ್ಯಾಟರ್‌ ಋತುರಾಜ್‌ ಗಾಯಕವಾಡ್‌ (92) ಅವರ ಬ್ಯಾಟಿಂಗ್‌ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 178 ರನ್ ಕಲೆಹಾಕಿತ್ತು.

ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಈ ಗುರಿಯನ್ನು ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ತಲುಪಿತು. 36 ಎಸೆತಗಳಲ್ಲಿ 63 ರನ್‌ ಗಳಿಸಿದ ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ ಅವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.