9ನೇ ಕ್ರಮಾಂಕದಲ್ಲಿ ಬಂದು ಅರ್ಧಶತಕ ಬಾರಿಸಿದ ಅಕ್ಷರ್ ಪಟೇಲ್ ಧೈರ್ಯ ಮೆಚ್ಚಿದ ಪಠಾಣ್

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡದ ವಿರುದ್ಧ ಭಾರತ ತಂಡ ಮೇಲುಗೈ ಸಾಧಿಸಿದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಭರ್ಜರಿ ಶತಕ, ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರ ಅಮೋಘ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಮೊದಲ ಇನ್ನಿಂಗ್ಸ್‌ನ ಎರಡನೇ ದಿನದಾಟದ ಅಂತ್ಯಕ್ಕೆ 144 ರನ್‌ಗಳ ಮುನ್ನಡೆ ಗಳಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ 177 ರನ್‌ಗಳಿಗೆ ಪ್ರತ್ಯುತ್ತರವಾಗಿ, ಭಾರತ ತಂಡ ಎರಡನೇ ದಿನದಾಟದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿದೆ. ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಮುರಿಯದ 8ನೇ ವಿಕೆಟ್ ಜೊತೆಯಾಟಕ್ಕೆ 81 ರನ್ ಕಲೆಹಾಕಿದ್ದಾರೆ.
ಇದೇ ವೇಳೆ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಗುಣಗಾನ ಮಾಡಿರುವ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ನಾಗ್ಪುರ ಪಿಚ್ ಮೇಲಿನ ಆಸ್ಟ್ರೇಲಿಯಾ ಮಾಧ್ಯಮ ಹಾಗೂ ಮಾಜಿ ಕ್ರಿಕೆಟಿಗರ ವಿವಾದಾತ್ಮಕ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಮೊದಲು ಊಹಿಸಿದಂತೆ ನಾಗ್ಪುರದ ಪಿಚ್‌ನಲ್ಲಿ ಯಾವುದೇ ರಾಕ್ಷಸಗಳಿಲ್ಲ ಎಂದು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಹೇಳಿದ್ದಾರೆ.
2ನೇ ದಿನದಂದು ಅಕ್ಷರ್ ಪಟೇಲ್ ಅವರ ಪ್ರದರ್ಶನವನ್ನು ಉಲ್ಲೇಖಿಸಿ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಯೋಗ್ಯವಾಗಿದೆ ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ. ಅಕ್ಷರ್ ಪಟೇಲ್ 102 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ 52 ರನ್ ಗಳಿಸಿ ಅಜೇಯರಾಗಿ ಉಳಿದರು. ಅಕ್ಷರ್ ಪಟೇಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಎರಡನೇ ಅರ್ಧಶತಕವನ್ನು ಬಾರಿಸಿದರು.
ಅಕ್ಷರ್ ಪಟೇಲ್ 9ನೇ ಕ್ರಮಾಂಕದಲ್ಲಿ ಬಂದು ಅರ್ಧಶತಕ ಗಳಿಸಲು ಯಶಸ್ವಿಯಾದ ಕಾರಣ, ನಾಗ್ಪುರದ ಪಿಚ್ ಬ್ಯಾಟರ್‌ಗಳಿಗೆ ಸಾಕಷ್ಟು ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು.
"ಅಕ್ಷರ್ ಪಟೇಲ್ 2ನೇ ದಿನ 9ನೇ ಕ್ರಮಾಂಕದಲ್ಲಿ ಬಂದು ಅರ್ಧಶತಕ ಗಳಿಸಿದ್ದಾರೆ. ಹಾಗಾದರೆ ಇದು ಉತ್ತಮ ಪಿಚ್ ಅಲ್ಲವೇ?," ಎಂದು ಇರ್ಫಾನ್ ಪಠಾಣ್ ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಎಡಗೈ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಕ್ರೀಸ್‌ಗೆ ಬಂದಾಗ, ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 64 ರನ್‌ಗಳ ಗಣನೀಯ ಮುನ್ನಡೆ ಸಾಧಿಸಿತ್ತು. ಅಲ್ಲಿಂದ ಮುಂದೆ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಎಂಟನೇ ವಿಕೆಟ್‌ಗೆ 81 ರನ್‌ಗಳ ಅಜೇಯ ಜೊತೆಯಾಟ ನೀಡಿದರು.
ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದ್ದ ರವೀಂದ್ರ ಜಡೇಜಾ ಬ್ಯಾಟಿಂಗ್‌ನಲ್ಲಿ ತಮ್ಮ ಕರಾಮತ್ತು ತೋರಿಸಿದರು. ಜಡೇಜಾ 170 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯದಿಂದ 66 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮುನ್ನ ರೋಹಿತ್ ಶರ್ಮಾ ನಾಯಕನಾಗಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಭಾರತಕ್ಕೆ ಭದ್ರ ಬುನಾದಿ ಹಾಕಿದರು. ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುವ ಮುನ್ನ ಭಾರತದ ನಾಯಕ 212 ಎಸೆತಗಳಲ್ಲಿ 15 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 120 ರನ್ ಬಾರಿಸಿದರು.
ಆಸ್ಟ್ರೇಲಿಯಾ ಪರ ಬೌಲಿಂಗ್‌ನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಟಾಡ್ ಮರ್ಫಿ 36 ಓವರ್‌ಗಳಲ್ಲಿ 82 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಟಾಡ್ ಮರ್ಫಿ ಭಾರತದ ನೆಲದಲ್ಲಿ ಭಾರತ ವಿರುದ್ಧ ಐದು ವಿಕೆಟ್ ಗೊಂಚಲು ಪಡೆದ ಆಸ್ಟ್ರೇಲಿಯಾದ ಎರಡನೇ ಸ್ಪಿನ್ನರ್ ಎಂಬ ದಾಖಲೆಯನ್ನು ಬರೆದರು.