8 ವರ್ಷಗಳಲ್ಲಿ 98 ಲಕ್ಷ ಕೋಟಿ ಸಾಲ ಮಾಡಿದ್ದೇ ಮೋದಿಯ ಸಾಧನೆ : ದಿನೇಶ್ ಗುಂಡೂರಾವ್

8 ವರ್ಷಗಳಲ್ಲಿ 98 ಲಕ್ಷ ಕೋಟಿ ಸಾಲ ಮಾಡಿದ್ದೇ ಮೋದಿಯ ಸಾಧನೆ : ದಿನೇಶ್ ಗುಂಡೂರಾವ್

ಬೆಂಗಳೂರು: ಮೋದಿ ಆಡಳಿತದಲ್ಲಿ ಭಾರತ ಸಾಲದಲ್ಲಿ ವಿಶ್ವಗುರು ಆಗಿದೆ. ಕಳೆದ 8 ವರ್ಷಗಳಲ್ಲಿ 98 ಲಕ್ಷ ಕೋಟಿ ಸಾಲ ಮಾಡಿದ್ದೇ ಮೋದಿಯವರ ಸಾಧನೆ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂ ರಾವ್ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿದ ಅವರು ಯುಪಿಎ ಆಡಳಿತದ ಅಂತ್ಯಕ್ಕೆ ಭಾರತದ ಸಾಲ 63,583 ಕೋಟಿ ಇತ್ತು. ಆದರೆ ಮೋದಿಯವರು ಕೇವಲ‌ 8 ವರ್ಷದಲ್ಲಿ ಸಾಲದ ಪ್ರಮಾಣ 1.40 ಲಕ್ಷ ಕೋಟಿಗೆ ಏರಿಸಿದ್ದಾರೆ. ಈ ಸಾಲ ಮಾಡಿರುವುದು ಯಾರ ಉದ್ಧಾರಕ್ಕೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಲ‌ ಮಾಡಿ ತುಪ್ಪ ತಿನ್ನುವಂತೆ ಮೋದಿ ಆಡಳಿತದಲ್ಲಿ ಗೊತ್ತು ಗುರಿಯಿಲ್ಲದೆ ಸಾಲ ಮಾಡಲಾಗಿದೆ. ಈ ಸಾಲದಲ್ಲಿ ತುಪ್ಪ ತಿನ್ನುತ್ತಿರುವವರು ಯಾರು ಎಂಬುದೇ ಯಕ್ಷ ಪ್ರಶ್ನೆ? ಜಿಡಿಪಿ ಕುಸಿದಿದೆ. ಅಭಿವೃದ್ಧಿ ಶೂನ್ಯವಾಗಿದೆ. ಹಾಗಾದರೆ ಆ ಸಾಲ ಎಲ್ಲಿಗೆ ಖರ್ಚಾಗುತ್ತಿದೆ. ಪಿಎಂ ಕೇರ್ ನಂತೆ ಯಾವುದಾದರೂ ಉಂಡೆನಾಮದ ಸ್ಕೀಮ್‌ಗೆ ಹಣ ಬಳಕೆಯಾಗುತ್ತಿದೆಯೆ? ಎಂದು ಪ್ರಶ್ನೆ ಮಾಡಿದ್ದಾರೆ.

ಮನ್‌ಮೋಹನ್ ಸಿಂಗ್ ಸರ್ಕಾರವಿದ್ದಾಗ ಜನರಿಗೆ ಗ್ಯಾಸ್ ಸಬ್ಸಿಡಿ, ರಸಗೊಬ್ಬರ ಸಬ್ಸಿಡಿ, ತೈಲಗಳ ಮೇಲೆ ಅತಿಕಡಿಮೆ ತೆರಿಗೆ ಹಾಗೂ ಅಬಕಾರಿ ಸುಂಕ ವಿಧಿಸಲಾಗುತಿತ್ತು. ಅಷ್ಟಾದರೂ ದೇಶದ ಸಾಲ 76 ಲಕ್ಷ ಕೋಟಿ ದಾಟಿರಲಿಲ್ಲ. ಈ ಸರ್ಕಾರದಲ್ಲಿ ಬಹುತೇಕ ಸಬ್ಸಿಡಿಗಳು ರದ್ದಾಗಿವೆ. ತೈಲಗಳ ಮೇಲೆ ವಿಪರೀತ ಎನ್ನುವಷ್ಟು ತೆರಿಗೆ ವಿಧಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಮೋದಿಯವರು ಕಾಂಗ್ರೆಸ್ ಮಾಡಿದ ಸಾಲ ತೀರಿಸುತ್ತಿದ್ದಾರೆ ಎಂದು ಬಿಜೆಪಿ ಭಕ್ತರು, ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಹರಡುತ್ತಿದ್ದಾರೆ.
ವಾಸ್ತವವಾಗಿ 2014 ರವರೆಗೆ ಇದ್ದ ದೇಶದ ಒಟ್ಟು ಸಾಲದ ಮೊತ್ತವೇ 76 ಲಕ್ಷ ಕೋಟಿ.‌ ಆದರೆ ಮೋದಿ 8 ವರ್ಷದಲ್ಲಿ 98 ಲಕ್ಷ ಕೋಟಿ ಹೆಚ್ಚವರಿ ಸಾಲ ಮಾಡಿದ್ದಾರೆ. ಹೀಗಿರುವಾಗ ಮೋದಿ ಯಾರ ಸಾಲ ತೀರಿಸುತ್ತಿದ್ದಾರೆ? ಮೋದಿ ಆಡಳಿತದಲ್ಲಿ ಆರ್ಥಿಕ ಶಿಸ್ತು ಹಳ್ಳ ಹಿಡಿದಿದೆ ಎಂಬುದಕ್ಕೆ ಈ ಸರ್ಕಾರ ಮಾಡಿರುವ ಸಾಲದ ಪ್ರಮಾಣವೇ ಸಾಕ್ಷಿ. ಮೋದಿಯವರು‌ ಮಾಡಿರುವ ಸಾಲದ ಎಫೆಕ್ಟ್ ಹೇಗಿದೆಯೆಂದರೆ, ಅಸಲು ಹೋಗಲಿ, ಬಡ್ಡಿ ಕಟ್ಟಲು ಸಾಧ್ಯವಿಲ್ಲದಷ್ಟು ವಿಪರೀತವಾಗಿದೆ. ಇದು ದೇಶ ದಿವಾಳಿಯಾಗುತ್ತಿರುವ ಪ್ರಾಥಮಿಕ ಲಕ್ಷಣ. ಇನ್ನಾದರೂ ಬಿಜೆಪಿ ಭಕ್ತರು ಮೋದಿ ಭ್ರಮೆಯಿಂದ ಹೊರಬರಲಿ ಎಂದು ಹೇಳಿದ್ದಾರೆ.