₹ 63.57 ಲಕ್ಷ ಮುಖಬೆಲೆಯ ಛಾಪಾ ಕಾಗದ ಜಪ್ತಿ; ಐವರನ್ನು ಬಂಧಿಸಿದ ಎಸ್‌ಐಟಿ

₹ 63.57 ಲಕ್ಷ ಮುಖಬೆಲೆಯ ಛಾಪಾ ಕಾಗದ ಜಪ್ತಿ; ಐವರನ್ನು ಬಂಧಿಸಿದ ಎಸ್‌ಐಟಿ

ಬೆಂಗಳೂರು: ನಕಲಿ ಛಾಪಾ ಕಾಗದಗಳನ್ನು ತಯಾರಿಸಿ ಮಾರುತ್ತಿದ್ದ ಜಾಲವನ್ನು ಭೇದಿಸಿರುವ ಪೂರ್ವ ವಿಭಾಗದ ವಿಶೇಷ ತನಿಖಾ ತಂಡ (ಎಸ್‌ಐಟಿ), ಮಹಿಳೆ ಸೇರಿ ಐವರು ಆರೋಪಿಗಳನ್ನು ಬಂಧಿಸಿದೆ. ₹ 63.57 ಲಕ್ಷ ಮುಖಬೆಲೆಯ ನಕಲಿ ಛಾಪಾ ಕಾಗದಗಳನ್ನು ಜಪ್ತಿ ಮಾಡಿದೆ.

'ನಕಲಿ ಛಾಪಾ ಕಾಗದ ಹಾಗೂ ಫ್ರಾಂಕಿಂಗ್ ಮಾಡದಿರುವ ಛಾಪಾ ಕಾಗದಗಳನ್ನು ಮಾರಾಟ ಮಾಡುತ್ತಿದ್ದ ಸಂಗತಿ ಅರ್ಜಿಯೊಂದರ ವಿಚಾರಣೆ ವೇಳೆ ಹೈಕೋರ್ಟ್ ಗಮನಕ್ಕೆ ಬಂದಿತ್ತು.

ಹೈಕೋರ್ಟ್‌ ನೀಡಿದ್ದ ನಿರ್ದೇಶನದನ್ವಯ ಹಲಸೂರು ಗೇಟ್ ಹಾಗೂ ಎಚ್‌ಎಎಲ್‌ ಠಾಣೆಗಳಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣ ಭೇದಿಸಲು ಪೂರ್ವ ವಿಭಾಗದ ಪೊಲೀಸರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು' ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.

'ಎಸ್‌ಬಿಐ ಕಾಟನ್‌ಪೇಟೆ ಶಾಖೆ ಹೆಸರಿನ ಚಿಕ್ಕ ರೌಂಡ್ ಸೀಲ್, ರಬ್ಬರ್ ಸೀಲ್‌ಗಳು, ಸ್ಕ್ರೀನ್ ಪ್ರೀಟಿಂಗ್ ಯಂತ್ರ, ಭಾರತ ಸರ್ಕಾರ ಹೆಸರಿನ ಮುದ್ರೆಗಳು, 233 ಖಾಲಿ ಹಾಳೆಗಳನ್ನು ಜಪ್ತಿ ಮಾಡಲಾಗಿದೆ' ಎಂದೂ ತಿಳಿಸಿದರು.

ಖರೀದಿ ಸೋಗಿನಲ್ಲಿ ಕಾರ್ಯಾಚರಣೆ: 'ನಕಲಿ ಛಾಪಾ ಕಾಗದಗಳನ್ನು ನ್ಯಾಯಾಲಯದ ಆವರಣದಲ್ಲಿ 2005ರಿಂದಲೇ ಮಾರಲಾಗುತ್ತಿದ್ದ ಮಾಹಿತಿ ಇದೆ. ಹಳೇ ವರ್ಷದ ಛಾಪಾ ಕಾಗದಗಳು ಬೇಕೆಂದು ಹೇಳಿ ಗ್ರಾಹಕರ ಸೋಗಿನಲ್ಲಿ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಹಣ ಪಡೆದಿದ್ದ ಆರೋಪಿ, ಕಾಗದ ನೀಡಿದ್ದ. ಕಾಗದ ಪರಿಶೀಲಿಸಿದಾಗ ನಕಲಿ ಎಂಬುದು ತಿಳಿಯಿತು'

'ಪರಿಚಯಸ್ಥರಿಗೆ ₹ 3,000ರಿಂದ ₹ 5,000ರವರೆಗೆ ಹಾಗೂ ಅಪರಿಚಿತರಿಗೆ ₹ 5,000ರಿಂದ ₹10,000ರವರೆಗೆ ಛಾಪಾ ಕಾಗದಗಳನ್ನು ಮಾರುತ್ತಿದ್ದರು. ಕಾಗದದ ಮೇಲೆ ನಕಲಿ ಎಂಬೋಜಿಂಗ್ ಹಾಗೂ ಪ್ರಾಂಕಿಂಗ್ ಬಳಸುತ್ತಿದ್ದರು. ಮೈಸೂರು ಅರಸರ ಆಳ್ವಿಕೆ ಕಾಲದ ಛಾಪಾ ಕಾಗದಗಳನ್ನೂ ಆರೋಪಿಗಳು ಸೃಷ್ಟಿಸಿ ಮಾರಿದ್ದರು. ಸಿವಿಲ್ ವ್ಯಾಜ್ಯಗಳಲ್ಲಿ ಜಮೀನು ಕಬಳಿಸಿರುವ ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿರುವ ಮಾಹಿತಿಯೂ ಇದೆ' ಎಂದರು.

'ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಹಾಗೂ ಎಸಿಪಿ ನಿಂಗಪ್ಪ ಸಕ್ರಿ ನೇತೃತ್ವದ ತಂಡಗಳು, ನಾಲ್ಕು ಕಡೆ ಇತ್ತೀಚೆಗೆ ದಾಳಿ ಮಾಡಿದ್ದವು. ಅಲ್ಲೆಲ್ಲ ಛಾಪಾ ಕಾಗದಗಳು ಹಾಗೂ ಅವುಗಳ ತಯಾರಿಕೆಗೆ ಬಳಸುವ ವಸ್ತುಗಳು ಸಿಕ್ಕಿವೆ' ಎಂದು ಕಮಲ್ ಪಂತ್ ಹೇಳಿದರು.

ಬಂಧಿತರು
ವಿವೇಕನಗರದ ಹುಸೇನ್ ಮೋದಿ ಬಾಬು (58), ಬಾಪೂಜಿನಗರದ ಸೀಮಾ ಅಲಿಯಾಸ್ ಶಾವರ್ (45), ಶಾಮಣ್ಣ ನಗರದ ನಯಾಜ್ ಅಹಮ್ಮದ್ (45), ವಿಜಯನಗರದ ಶಬ್ಬೀರ್ ಅಹಮದ್ (38) ಹಾಗೂ ಬಸವೇಶ್ವರನಗರದ ಸಿ.ಎಸ್. ಹರೀಶ್ (55) ಬಂಧಿತರು.