ಹೈದರಾಬಾದ್‌ನಲ್ಲಿ 4 ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ; 24 ಗಂಟೆಗಳಲ್ಲಿ ಎರಡನೇ ಘಟನೆ

ಹೈದರಾಬಾದ್‌ನಲ್ಲಿ 4 ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ; 24 ಗಂಟೆಗಳಲ್ಲಿ ಎರಡನೇ ಘಟನೆ

ಹೈದರಾಬಾದ್ (ತೆಲಂಗಾಣ): ಹೈದರಾಬಾದ್‌ನಲ್ಲಿ ಬೀದಿನಾಯಿಗಳ ಹಿಂಡು 5 ವರ್ಷದ ಬಾಲಕನನ್ನು ಕೊಂದು ಹಾಕಿದ ಒಂದು ದಿನದ ನಂತರ, ಮತ್ತೊಬ್ಬ 4 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿರುವ ಮತ್ತೊಂದು ಘಟನೆ ಮುನ್ನೆಲೆಗೆ ಬಂದಿದೆ.

ಹೈದರಾಬಾದ್‌ನ ಮಾರುತಿ ನಗರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯ ಕುರಿತು ಮಾತನಾಡಿದ ಗಾಯಗೊಂಡ ಮಗುವಿನ ತಾಯಿ, ನನ್ನ ಮಗು ಇತರ ಎರಡು ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ 4-5 ನಾಯಿಗಳು ದಾಳಿ ಮಾಡಿದವು. ಈ ಹಿಂದೆ ನಾವು ಪುರಸಭೆಯ ಅಧಿಕಾರಿಗಳಿಗೆ ದೂರು ನೀಡಿದ್ದೆವು. ಅವರು ನಾಯಿಗಳನ್ನು ಹಿಡಿದರು. ಆದ್ರೆ, ತಕ್ಷಣವೇ ಅವುಗಳನ್ನು ಬಿಡುಗಡೆ ಮಾಡಲಾಗಿದೆ. ನಮ್ಮ ಆಕ್ಷೇಪದ ನಡುವೆಯೂ ಇಲ್ಲಿನ ಜನರು ಈ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ ಎಂದಿದ್ದಾರೆ.

ಇದೇ ರೀತಿಯ ಘಟನೆಯಲ್ಲಿ, ಮಂಗಳವಾರ ಹೈದರಾಬಾದ್‌ನ ಬಾಗ್ ಅಂಬರ್‌ಪೇಟ್‌ನಲ್ಲಿರುವ ಎರುಕುಲ ಬಸ್ತಿಯಲ್ಲಿರುವ ಹೌಸಿಂಗ್ ಸೊಸೈಟಿಯಲ್ಲಿ ಐದು ವರ್ಷದ ಬಾಲಕನನ್ನು ಬೀದಿ ನಾಯಿಗಳ ಹಿಂಡು ಕಚ್ಚಿ ಕೊಂದಿವೆ. ಮೃತ ಅಪ್ರಾಪ್ತನನ್ನು ಪ್ರದೀಪ್ ಎಂದು ಗುರುತಿಸಲಾಗಿದೆ.