ಸ್ಮಾರ್ಟ್ ಸಿಟಿಗಳಂತೆ ಭಾರತಕ್ಕೆ ʻಸ್ಮಾರ್ಟ್ ಹಳ್ಳಿʼಗಳೂ ಬೇಕು: ನಿತಿನ್ ಗಡ್ಕರಿ

ಸ್ಮಾರ್ಟ್ ಸಿಟಿಗಳಂತೆ ಭಾರತಕ್ಕೆ ʻಸ್ಮಾರ್ಟ್ ಹಳ್ಳಿʼಗಳೂ ಬೇಕು: ನಿತಿನ್ ಗಡ್ಕರಿ

ನಿತಿನ್ ಗಡ್ಕರಿ ಅವರು ಶನಿವಾರ ಸ್ಮಾರ್ಟ್ ಸಿಟಿಗಳ ಜೊತೆಗೆ ಭಾರತಕ್ಕೆ ʻಸ್ಮಾರ್ಟ್ ಹಳ್ಳಿ(Smart Villages)ʼಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

ನಾಸಿಕ್ ಜಿಲ್ಲೆಯ ಸಿನ್ನಾರ್ ತಾಲೂಕಿನ ನಂದೂರ್ ಶಿಂಗೋಟೆಯಲ್ಲಿ ದಿವಂಗತ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಗೋಪಿನಾಥ್ ಮುಂಡೆ ಅವರ ಪ್ರತಿಮೆ ಮತ್ತು ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ನ್ಯಾಯ ಕೊಡಿಸಲು ಮುಂಡೆ ಮುಂದಾಳತ್ವ ವಹಿಸಿದ್ದರು. ಕೃಷ್ಣಾ ಕಣಿವೆ, ತಾಪಿ ನೀರಾವರಿ ಮತ್ತು ವಿದರ್ಭ ನೀರಾವರಿ ಯೋಜನೆಗಳ ಮೂಲಕ ರೈತರಿಗಾಗಿ ದುಡಿದಿದ್ದಾರೆ. ಅವರ ಪರಂಪರೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ರೈತರ ಮಕ್ಕಳಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಬೇಕು. ರೈತರು ಅನ್ನ ನೀಡುವ ಜತೆಗೆ ಇಂಧನ ಪೂರೈಕೆದಾರರಾಗಬೇಕು. ಸ್ಮಾರ್ಟ್ ಸಿಟಿ ಯೋಜನೆ ಜತೆಗೆ ಸ್ಮಾರ್ಟ್ ವಿಲೇಜ್ ಪರಿಕಲ್ಪನೆಯನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮುಂಡೆ ಅವರು ಜನಪರ ಹೋರಾಟದ ನಿಜವಾದ ಚಾಂಪಿಯನ್ ಎಂದು ಶ್ಲಾಘಿಸಿದರು. ಅವರು 'ಲೋಕನೇತೆ' (ಜನರ ನಾಯಕ) ಎಂಬ ವಿಶೇಷಣಕ್ಕೆ ಅರ್ಹರಾಗಿದ್ದರು ಮತ್ತು ಅದಕ್ಕೆ ತಕ್ಕಂತೆ ಬದುಕಿದರು ಎಂದು ಏಕನಾಥ್ ಶಿಂಧೆ ಹೇಳಿದರು.