ಸ್ಟಾರ್ ಕ್ಯಾಂಪೇನ್'ಗಳ ಆದಾಯ ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ 'KRS ಪಕ್ಷ' ಮನವಿ
ಬೆಂಗಳೂರು: ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿರುವ ಸಿನಿಮಾ ನಟ/ನಟಿಯರ ಆದಾಯವನ್ನು ಪರಿಶೀಲಿಸುವ ಬಗ್ಗೆ ಮತ್ತು ಅವರಿಗೆ ಕೊಟ್ಟಿರಬಹುದಾದ ಶುಲ್ಕವನ್ನು ಅಭ್ಯರ್ಥಿಗಳ ಚುನಾವಣಾ ಖರ್ಚಿನ ಬಾಬತ್ತಿಗೆ ಸೇರಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕೆ ಆರ್ ಎಸ್ ಪಕ್ಷದಿಂದ ದೂರು ನೀಡಲಾಗಿದೆ.
ಇಂದು ಕರ್ನಾಟಕ ರಾಷ್ಟ್ರ ಸಮಿತಿಯ ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ ಅವರು, ರಾಜ್ಯ ಚುನಾವಣಾ ಆಯೋಗಕ್ಕೆ ತೆರಳಿ ದೂರು ನೀಡಿದ್ದಾರೆ. ಅವರು ನೀಡಿರುವಂತ ದೂರಿನಲ್ಲಿ, ಇದೇ ಮೇ 10, 2023ಕ್ಕೆ ಕರ್ನಾಟಕ ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿವೆ. ಎಲ್ಲರಿಗೂ ತಿಳಿದಿರುವಂತೆ ಹಿಂದಿನ ಹತ್ತಿಪ್ಪತ್ತು ವರ್ಷಗಳಿಂದ ಕರ್ನಾಟಕದಲ್ಲಿ ಚುನಾವಣಾ ಅಕ್ರಮಗಳು ಮಿತಿಮೀರಿ ನಡೆಯುತ್ತಿವೆ. ಚುನಾವಣಾ ಆಯೋಗ ವಿಧಿಸಿರುವ ವೆಚ್ಚದ ಮಿತಿಯಲ್ಲಿ ಪ್ರಚಾರ ಮಾಡಿ ಗೆದ್ದು ಬಂದಿರುವ ಯಾವೊಬ್ಬ ವ್ಯಕ್ತಿಯೂ ಕಳೆದ ಒಂದೆರಡು ದಶಕದಲ್ಲಿ ಕರ್ನಾಟಕದಲ್ಲಿ ಇಲ್ಲ ಎನ್ನುವುದು ಸರ್ವವಿದಿತ ಎಂದಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಆಮಿಷ ಒಡ್ಡಲು ಹಣ-ಹೆಂಡ-ಕುಕ್ಕರ್-ತವಾ+ಸೀರೆ ಇತ್ಯಾದಿಗಳನ್ನು ಹಂಚುವುದು ಒಂದು ರೀತಿಯ ಅಕ್ರಮವಾದರೆ, ಸಭೆಗಳಿಗೆ ಜನ ಸೇರಿಸಲು ಸಿನಿಮಾ ತಾರೆಗಳನ್ನು ಚುನಾವಣಾ ಪ್ರಚಾರಕ್ಕೆ ಕರೆಸುವುದು ಮತ್ತೊಂದು ರೀತಿಯ ಚುನಾವಣಾ ಆಕ್ರಮ. ಹಣವಂತ ಮತ್ತು ಪ್ರಭಾವಶಾಲಿ ಅಭ್ಯರ್ಥಿಗಳಿಗೆ ಯಾವುದೇ ಪರಿಚಯವಿಲ್ಲದ ಮತ್ತು ಆಪ್ತರೂ ಅಲ್ಲದ ಸೆಲೆಬ್ರಿಟಿಗಳು ಮತ್ತು ಸಿನಿಮಾ ತಾರೆಯರು ಶುಲ್ಕವಿಲ್ಲದೆ (ಅಂದರೆ ದುಡ್ಡು ತೆಗೆದುಕೊಳ್ಳದೆ) ಇಂತಹ ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ ಎಂದು ತಿಳಿಸಿದ್ದಾರೆ.
ಯಾವುದೇ ರಾಜಕೀಯ ಪಕ್ಷದ ಸದಸ್ಯರಲ್ಲದ ಮತ್ತು ಪಕ್ಷಾತೀತವಾಗಿ ತಮಗೆ ದುಡ್ಡು ಕೊಡುವ ಕೆಲವೇ ವ್ಯಕ್ತಿಗಳ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರುವ ಸಿನೆಮಾ ನಟ/ನಟಿಯರು ಅವರನ್ನು ಅಭಿಮಾನಿಸುವ ಅಥವ ಆರಾಧಿಸುವ ಮತದಾರರ ವಿಶ್ವಾಸವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಅವರ ಈ ಅನೈತಿಕ ಕೃತ್ಯವು ಸಹಜವಾಗಿಯೇ ಚುನಾವಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಇಂತಹ ಪ್ರಚಾರಗಳಿಗೆ ಕೇವಲ ಕನ್ನಡದ ನಟನಟಿಯರು ಮಾತ್ರವಲ್ಲದೆ ಗಡಿಭಾಗಗಳಲ್ಲಿ-ಅದರಲ್ಲಿಯೂ ಆಂಧ್ರ/ತೆಲಂಗಾಣ ಗಡಿ ಕ್ಷೇತ್ರಗಳಲ್ಲಿ-ತೆಲುಗು ನಟನಟಿಯರನ್ನೂ ಪ್ರಚಾರಕ್ಕೆ ಕರೆಸುತ್ತಾರೆ. ಕನ್ನಡ ಬಾರದ, ಕರ್ನಾಟಕದ ರಾಜಕಾರಣದಲ್ಲಿ ಆಸಕ್ತಿ ಇಲ್ಲದ ಪರಭಾಷಾ ನಟರನ್ನು ಕೇವಲ ಜನರನ್ನು ಸೇರಿಸುವ ಉದ್ದೇಶಕ್ಕಾಗಿಯೇ ಲಕ್ಷಾಂತರ ರೂಪಾಯಿ ಕಪ್ಪುಹಣ ಕೊಟ್ಟು ಭ್ರಷ್ಟ ರಾಜಕಾರಣಿಗಳು ಕರೆಸಿಕೊಳ್ಳುತ್ತಾರೆ ಎಂದಿದ್ದಾರೆ.
ಹಾಗಾಗಿ ಚುನಾವಣಾ ಪ್ರಚಾರಕ್ಕೆ ಬರುವ ಯಾವುದೇ ಪಕ್ಷದ ಸದಸ್ಯರಾಗಿಲ್ಲದ ಸಿನಿಮಾ ನಟನಟಿಯರ ವಿವರಗಳನ್ನು ಚುನಾವಣಾ ಆಯೋಗ ಸಂಗ್ರಹಿಸಬೇಕು ಮತ್ತು ಅವರನ್ನು ಪ್ರಚಾರಕ್ಕೆ ಕರೆಸಿಕೊಳ್ಳುವ ಅಭ್ಯರ್ಥಿಗಳು ಅವರಿಗೆ ನೀಡಿರಬಹುದಾದ ಶುಲ್ಕವನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚದ ಬಾಬತ್ತಿಗೆ ಸೇರಿಸಬೇಕು. ಹಾಗೆಯೆ ಇದು ಬಹುತೇಕ ಕಪ್ಪುಹಣದ ವ್ಯವಹಾರಗಳಾಗಿದ್ದು, ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಎಲ್ಲಾ ಸೆಲೆಬ್ರಿಟಿ ಮತ್ತು ಸಿನಿಮಾ ನಟನಟಿಯರ ವಿವರಗಳನ್ನು ತಾವು ಆದಾಯ ತೆರಿಗೆ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು. ಈ ಸಮಯದಲ್ಲಿ ಕೆಲವರು ಲಕ್ಷಗಳಲ್ಲಿ ಮತ್ತೆ ಕೆಲವರು ಕೋಟಿಗಳಲ್ಲಿ ಸಂಪಾದಿಸುವ ಅವಕಾಶವಿದ್ದು, ಅದೆಲ್ಲವನ್ನೂ ಅವರು ತಮ್ಮ ಆದಾಯದಲ್ಲಿ ತೋರಿಸುವುದಿಲ್ಲ. ಹಾಗಾಗಿ ಆದಾಯ ತೆರಿಗೆ ಇಲಾಖೆ ತನ್ನದೇ ಮಾರ್ಗದಲ್ಲಿ ತನಿಖೆ ಮಾಡಿ ತೆರಿಗೆಗಳ್ಳರನ್ನು ಕಾನೂನಿನ ವ್ಯಾಪ್ತಿಗೆ ತರಬೇಕಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ಈ ಪತ್ರದಲ್ಲಿ ಬರೆದಿರುವ ವಿಚಾರಗಳನ್ನು ತಾವು ಸಾರ್ವಜನಿಕವಾಗಿ ಪತ್ರಿಕಾ ಪ್ರಕಟಣೆ ಹೊರಡಿಸುವುದರ ಮೂಲಕ ಗೊತ್ತಿಲ್ಲದೆ ಭ್ರಷ್ಟ ರಾಜಕಾರಣಿಗಳ ಹಣದ ಆಸೆಗೆ ಬಲಿಯಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಮುಗ್ಧ ಅಥವಾ ಅಮಾಯಕ ವ್ಯಕ್ತಿಗಳಿಗೂ ಸೂಕ್ತ ಮಾಹಿತಿ ರವಾನೆ ಮಾಡಬೇಕೆಂದು KRS ಪಕ್ಷವು ತಮ್ಮನ್ನು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ನಡೆಯುವ ನಿಟ್ಟಿನಲ್ಲಿ ತಾವು ಇದೆಲ್ಲಾ ಕ್ರಮಗಳನ್ನು ಜರುಗಿಸುವುದು ಅನಿವಾರ್ಯ ಮಾತ್ರವಲ್ಲ, ಅದು ನಿಮ್ಮ ಕರ್ತವ್ಯವೂ ಆಗಿರುತ್ತದೆ.ಈ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕ್ರಮಗಳನ್ನು ತಾವು ಅತಿಶೀಘ್ರದಲ್ಲಿ ಕೈಗೊಳ್ಳುತ್ತೀರಿ ಎನ್ನುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ