ʼಸೆಪ್ಟೆಂಬರ್ 13ʼ ಚಿತ್ರಕ್ಕೆ ಆರು ತಿಂಗಳ ತೆರಿಗೆ ವಿನಾಯಿತಿ : ರಾಜ್ಯ ಸರ್ಕಾರ ಆದೇಶ
ಬೆಂಗಳೂರು:ಬರುವ ನವಂಬರ್ 4 ರಂದು ಬಿಡುಗಡೆಯಾಗಲಿರುವ ಕೋವಿಡ್ ಸೇವೆ ಆಧಾರಿತ ಕಥಾ ಹಂದರ ಹೊಂದಿರುವ 'ಸೆಪ್ಟೆಂಬರ್ ಶೀರ್ಷಿಕೆಯ ಕನ್ನಡ ಚಲನಚಿತ್ರಕ್ಕೆ ಆರು ತಿಂಗಳ ಕಾಲ ರಾಜ್ಯ ಸರಕು ಮತ್ತು ಸೇವಾ ತೆರಿಗೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಚಿತ್ರ ನಿರ್ಮಾಪಕ ಐವಾನ್ ನಿಗ್ಗಿ, ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ನವೆಂಬರ್ 4 ರಿಂದ ಕರ್ನಾಟಕ ರಾಜ್ಯದಲ್ಲಿ ಪ್ರದರ್ಶನಗೊಳ್ಳಲಿರುವ "ಸೆಪ್ಟೆಂಬರ್ 13"ಕನ್ನಡ ಚಲನಚಿತ್ರಕ್ಕೆ ಶೇಕಡಾ 100ರಷ್ಟು ತೆರಿಗೆ ವಿನಾಯಿತಿ ಕಲ್ಪಿಸುವಂತೆ ಮನವಿ ಮಾಡಿದ್ದು, ಈ ಮನವಿ ಪತ್ರದಲ್ಲಿ ಕೋವಿಡ್ ಕಾಲದಲ್ಲಿ ದಾದಿಯರ ಸೇವೆ, ತ್ಯಾಗ ಎತ್ತಿ ಹಿಡಿಯುವ ಆಶಯ ಈ ಚಿತ್ರದ ಕಥಾ ಹಂದರದಲ್ಲಿ ಒಳಗೊಂಡಿದೆ, ಇದರ ಜೊತೆಗೆ ಈ ಚಿತ್ರವು ವೈದ್ಯಕೀಯ ವಲಯದವರ ಗೌರವಾರ್ಥ ಸ್ಮರಿಸುವ ಬಗ್ಗೆ ಸಂದೇಶ ಸಾರುತ್ತದೆ ಎಂದು ತಿಳಿಸಿರುತ್ತಾರೆ.ಹಾಗಾಗಿ ಈ ಮನವಿಯನ್ನು ಪರಿಗಣಿಸಿ, ಈ ಚಿತ್ರವನ್ನು ತೆರಿಗೆ ಮುಕ್ತಗೊಳಿಸಿದರೆ, ದೇಶದ ಇನ್ನಷ್ಟು ಜನರಿಗೆ ಈ ಸಂದೇಶ ಮುಟ್ಟಿಸುವಲ್ಲಿ ಸಹಕಾರಿಯಾಗುವುದರಿಂದ ಸೂಕ್ತ ಆದೇಶ ಹೊರಡಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದ ನಿರ್ದೇಶನದನ್ವಯ ತೆರಿಗೆ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯಾದ್ಯಂತ ಚಲನಚಿತ್ರ ಮಂದಿರಗಳು/ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನಗೊಳ್ಳುವ "ಸೆಪ್ಟೆಂಬರ್ 13" ಎಂಬ ಶೀರ್ಷಿಕೆಯುಳ್ಳ ಕನ್ನಡ ಚಲನಚಿತ್ರ ಪ್ರದರ್ಶನಗಳಿಗೆ ನವೆಂಬರ್ 4 ರಿಂದ ಆರು ತಿಂಗಳ ಅವಧಿಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ ವಿನಾಯಿತಿ ನೀಡಲಾಗಿದೆ.