ಸಾವರ್ಕರ್ ಅವರನ್ನು ಅವಮಾನಿಸಿದರೆ. ರಾಹುಲ್‌ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ

ಸಾವರ್ಕರ್ ಅವರನ್ನು ಅವಮಾನಿಸಿದರೆ. ರಾಹುಲ್‌ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ

ಹಾರಾಷ್ಟ್ರ: ನಮ್ಮ ಆರಾಧ್ಯ ದೈವ ಸಾವರ್ಕರ್ ಅವರನ್ನು ಅವಮಾನಿಸಬೇಡಿ, ಅವಮಾನಿಸಿದರೆ ಪರಿಸ್ಥಿತಿ ಸರಿಯಾಗಿರುವುದಿಲ್ಲ ಎಂದು ರಾಹುಲ್‌ ಗಾಂಧಿ ಅವರಿಗೆ ಶಿವಸೇನೆ( ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರ್ಕರ್ ಅವರನ್ನು ಎಲ್ಲರೂ ತಮ್ಮ ಆರಾಧ್ಯ ದೈವ ಎಂದು ಪರಿಗಣಿಸುತ್ತಾರೆ ಮತ್ತು ಅವರನ್ನು ಅವಮಾನಿಸಬೇಡಿ ಎಂದಿದ್ದಾರೆ.

ಅಂಡಮಾನ್‌ ನ ಸೆಲ್ಯುಲರ್ ಜೈಲಿನಲ್ಲಿ 14 ವರ್ಷಗಳ ಕಾಲ ಊಹಿಸಲಾಗದ ಹಿಂಸೆಯನ್ನು ಸಾವರ್ಕರ್ ಅನುಭವಿಸಿದರು. ಅವರ ನೋವುಗಳನ್ನು ಮಾತ್ರ ಕೇಳಬಹುದು ಅದು ಅವರ ತ್ಯಾಗದ ಪ್ರತೀಕ. ನಾವು ಸಾವರ್ಕರ್ ಅವರಿಗೆ ಆಗುವ ಅವಮಾನವನ್ನು ಸಹಿಸಲಾರೆವು ಎಂದು ಹೇಳಿದರು.

ರಾಹುಲ್ ಗಾಂಧಿಯವರು ಸಾವರ್ಕರ್ ಅವರನ್ನು ಕೀಳಾಗಿ ಕಾಣುವುದನ್ನು ಮುಂದುವರಿಸಿದರೆ ಪ್ರತಿಪಕ್ಷಗಳ ಮೈತ್ರಿಯಲ್ಲಿ ಬಿರುಕುಗಳು ಉಂಟಾಗಬಹುದು ಎಂದು ಹೇಳಿದರು.

ವೀರ ಸಾವರ್ಕರ್ ನಮ್ಮ ದೇವರು. ಅವರಿಗೆ ಅಗೌರವ ತೋರಿಸಿದರೆ ನಾವು ಅದನ್ನು ಸಹಿಸುವುದಿಲ್ಲ. ನಾವು ಹೋರಾಟಕ್ಕೆ ಸಿದ್ದರಿದ್ದೇವೆ. ಆದರೆ ನಮ್ಮ ದೇವರನ್ನು ಅವಮಾನಿಸಿದರೆ ಅದನ್ನು ಮಾತ್ರ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಇತ್ತೀಚೆಗೆ "ನನ್ನ ಹೆಸರು ಸಾವರ್ಕರ್ ಅಲ್ಲ, ಗಾಂಧಿ, ನಾನು ಎಂದಿಗೂ ಕ್ಷಮೆ ಕೇಳುವುದಿಲ್ಲ" ಎಂದು ಹೇಳಿದ್ದರು. ಈ ಮಾತನ್ನೇ ಉಲ್ಲೇಖಿಸಿ ಉದ್ಧವ್ ಠಾಕ್ರೆ ರಾಹುಲ್‌ ಅವರಿಗೆ ಸಾವರ್ಕರ್ ಬಗ್ಗೆ ಅಗೌರವ ತೋರಬೇಡಿ ಎಂದು ಹೇಳಿದ್ದಾರೆ.