ಸರ್ಕಾರಿ ನೌಕರ ರಾಜಕೀಯ, ಚುನಾವಣೆಯಲ್ಲಿ ಭಾಗವಹಿಸುವುದು; ನಿಯಮಗಳು

ಸರ್ಕಾರಿ ನೌಕರ ರಾಜಕೀಯ, ಚುನಾವಣೆಯಲ್ಲಿ ಭಾಗವಹಿಸುವುದು; ನಿಯಮಗಳು

ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. 15ನೇ ವಿಧಾನಸಭೆಯ ಕೊನೆಯ ಅಧಿವೇಶನ ಶುಕ್ರವಾರ ನಡೆದಿದೆ.

ರಾಜಕೀಯ ಪಕ್ಷಗಳು ಬೇಸಿಗೆಯ ಬಿಸಿಗಿಂತ ಹೆಚ್ಚಾಗಿ ಚುನಾವಣಾ ತಯಾರಿ ನಡೆಸುತ್ತಿದ್ದಾರೆ. ಸಮಾವೇಶ, ಜಾಥಾ, ಪಾದಯಾತ್ರೆ ಹೀಗೆ ಸಾಲು ಸಾಲು ಕಾರ್ಯಕ್ರಮಗಳು ನಡೆಯುತ್ತಿವೆ. ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ.

ಈ ಬಾರಿಯ ಚುನಾವಣಾ ಕಣಕ್ಕಿಳಿಯಲು ಕೆಲವು ಸರ್ಕಾರಿ ನೌಕರರು ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚುನಾವಣೆ ಮತ್ತು ರಾಜಕೀಯದಲ್ಲಿ ಸರ್ಕಾರಿ ನೌಕರರು ಯಾವ ರೀತಿ ಪಾಲ್ಗೊಳ್ಳಬೇಕು?. ಈ ಕುರಿತು ಇರುವ ನಿಯಮಗಳೇನು? ಎಂಬುದು ಸಾಮಾನ್ಯ ಜನರ ಪ್ರಶ್ನೆಯಾಗಿದೆ. ಈ ಕುರಿತು ನಿಯಮಗಳು ಸಹ ಇವೆ. ಸರ್ಕಾರಿ ನೌಕರರ ಜೊತೆ ಸಾಮಾನ್ಯ ಜನರು ಸಹ ಈ ಕುರಿತು ತಿಳಿದುಕೊಳ್ಳುವುದು ಉತ್ತಮವಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಕರ್ನಾಟಕದ ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021ರಲ್ಲಿ ಸರ್ಕಾರಿ ನೌಕರರ ಕರ್ತವ್ಯ, ಜವ್ದಾರಿಗಳು ಸೇರಿದಂತೆ ವಿವಿಧ ಮಾಹಿತಿ ಇದೆ. ಇದರಲ್ಲಿಯೇ ಸರ್ಕಾರಿ ನೌಕರನು ರಾಜಕೀಯದಲ್ಲಿ ಮತ್ತು ಚುನಾವಣೆಯಲ್ಲಿ ಭಾಗವಹಿಸುವುದು ಎಂಬ ವಿವರಣೆಯನ್ನು ನೀಡಲಾಗಿದೆ. ಇದರಲ್ಲಿ ರಾಜಕೀಯ ಮತ್ತು ಚುನಾವಣೆಯ ಪ್ರತಿಯೊಂದು ಅಂಶವನ್ನು ವಿವರಿಸಲಾಗಿದೆ.

ಯಾವುದೇ ಸರ್ಕಾರಿ ನೌಕರನು, ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರತಕ್ಕದ್ದಲ್ಲ ಅಥವಾ ಅವುಗಳೊಂದಿಗೆ ಅನ್ಯಥಾ ಸಂಬಂಧ ಹೊಂದಿರತಕ್ಕದ್ದಲ್ಲ ಅಥವಾ ಯಾವುದೇ ರಾಜಕೀಯ ಚಳುವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸತಕ್ಕದ್ದಲ್ಲ, ಅದರ ಸಹಾಯಾರ್ಥ ವಂತಿಗೆ ನೀಡತಕ್ಕದ್ದಲ್ಲ ಅಥವಾ ಅದಕ್ಕೆ ಯಾವುದೇ ರೀತಿಯ ನೆರವು ನೀಡತಕ್ಕದ್ದಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕಾನೂನಿನ ಮೂಲಕ ಸ್ಥಾಪಿತವಾದ ಸರ್ಕಾರವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉರುಳಿಸುವಂಥದ್ದಾಗಿರುವ ಅಥವಾ ಉರುಳಿಸುವ ಉದ್ದೇಶ ಹೊಂದಿರುವ ಯಾವುದೇ ಚಳುವಳಿಯಲ್ಲಿ ಅಥವಾ ಚಟುವಟಿಕೆಯಲ್ಲಿ ಅವನ ಕುಟುಂಬದ ಯಾರೇ ಸದಸ್ಯನೂ ಭಾಗವಹಿಸದಂತೆ, ಅದರ ಸಹಾಯಾರ್ಥ ವಂತಿಗೆ ನೀಡದಂತೆ ಅಥವಾ ಇನ್ನಾವುದೇ ರೀತಿಯಿಂದ ನೆರವಾಗುವುದನ್ನು ತಡೆಗಟ್ಟಲು ಪ್ರಯತ್ನಿಸುವುದು ಪ್ರತಿಯೊಬ್ಬ ಸರ್ಕಾರಿ ನೌಕರನ ಕರ್ತವ್ಯವಾಗಿರತಕ್ಕದ್ದು.

ಇಂತಹ ಯಾವುದೇ ಚಳುವಳಿಯಲ್ಲಿ ಅಥವಾ ಚಟುವಟಿಕೆಯಲ್ಲಿ ಅವನ ಕುಟುಂಬದ ಸದಸ್ಯರು ಭಾಗವಹಿಸುವುದನ್ನು ವಂತಿಗೆ ನೀಡುವುದನ್ನು ಅಥವಾ ಬೇರೆ ರೀತಿಯಿಂದ ನೆರವು ನೀಡುವುದನ್ನು ತಡೆಗಟ್ಟಲು ಸರ್ಕಾರಿ ನೌಕರನಿಗೆ ಸಾಧ್ಯವಾಗದಿದ್ದರೆ, ಅವನು ಆ ವಿಷಯವನ್ನು ನಿಯಮಿಸಲಾದ ಪ್ರಾಧಿಕಾರಕ್ಕೆ ವರದಿ ಮಾಡತಕ್ಕದ್ದು ಎಂದು ನಿಯಮಾವಳಿಗಳಲ್ಲಿ ತಿಳಿಸಲಾಗಿದೆ.

ರಾಜಕೀಯದ ಮಾಹಿತಿ ಯಾವುದೇ ಒಂದು ಪಕ್ಷವು ರಾಜಕೀಯ ಪಕ್ಷವೇ ಅಥವಾ ಯಾವುದೇ ಸಂಘ ಸಂಸ್ಥೆಯು ರಾಜಕೀಯದಲ್ಲಿ ಭಾಗವಹಿಸುತ್ತಿದೆಯೇ ಅಥವಾ ಯಾವುದೇ ಚಳವಳಿಯು ಅಥವಾ ಚಟುವಟಿಕೆಯು (2)ನೇ ಉಪನಿಯಮದ ವ್ಯಾಪ್ತಿಯೊಳಗೆ ಬರುತ್ತದೆಯೇ ಎಂಬ ಯಾವುದೇ ಪ್ರಶ್ನೆ ಉದ್ಭವಿಸಿದಾಗ, ಆ ಕುರಿತು ಸರ್ಕಾರದ ತೀರ್ಮಾನವೇ ಅಂತಿಮವಾಗಿರತಕ್ಕದ್ದು.

ಯಾರೇ ಸರ್ಕಾರಿ ನೌಕರನು ಸಂಸತ್ತು, ರಾಜ್ಯ ವಿಧಾನಮಂಡಲದ ಯಾವುದೇ ಸದನ ಅಥವಾ ಸ್ಥಳೀಯ ಪ್ರಾಧಿಕಾರದ ಚುನಾವಣೆಗಳಲ್ಲಿ ಪ್ರಚಾರ ಮಾಡತಕ್ಕದ್ದಲ್ಲ ಅಥವಾ ಅನ್ಯಥಾ ಹಸ್ತಕ್ಷೇಪ ಮಾಡತಕ್ಕದ್ದಲ್ಲ ಅಥವಾ ಆ ಸಂಬಂಧದಲ್ಲಿ ತನ್ನ ಪ್ರಭಾವವನ್ನು ಬೀರತಕ್ಕದ್ದಲ್ಲ ಅಥವಾ ಅದರಲ್ಲಿ ಭಾಗವಹಿಸತಕ್ಕದ್ದಲ್ಲ ಎಂದು ತಿಳಿಸಲಾಗಿದೆ. ಪರಂತು ಅಂಥ ಯಾವುದೇ ಚುನಾವಣೆಯಲ್ಲಿ ತನ್ನ ಮತವನ್ನು ಚಲಾಯಿಸಲು ಅರ್ಹನಾಗಿರುವ ಸರ್ಕಾರಿ ನೌಕರನು ಮತ ಹಾಕಲು ತನಗಿರುವ ಹಕ್ಕನ್ನು ಚಲಾಯಿಸಬಹುದು.

ಆದರೆ ಆತನು ಹಾಗೆ ಮಾಡುವಾಗ, ಯಾವ ರೀತಿಯಲ್ಲಿ ತಾನು ಮತ ಹಾಕಲು ಉದ್ದೇಶಿಸಿದ್ದಾನೆ ಅಥವಾ ಮತ ಹಾಕಿದ್ದೇನೆ ಎಂಬ ಬಗ್ಗೆ ಯಾವುದೇ ಸೂಚನೆಯನ್ನು ನೀಡತಕ್ಕದ್ದಲ್ಲ ಹಾಗೂ ಯಾರಿಗೆ ಮತ ನೀಡಲು ಉದ್ದೇಶಿಸಿದ್ದೇನೆ ಅಥವಾ ಯಾರಿಗೆ ಮತ ನೀಡಿದ್ದೇನೆ ಎಂಬ ಬಗ್ಗೆ ಯಾವುದೇ ಸೂಚನೆಗಳನ್ನು ನೀಡತಕ್ಕದ್ದಲ್ಲ.

ಚುನಾವಣೆ ನಡೆಯುವಾಗ, ಸರ್ಕಾರಿ ನೌಕರನು ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೂಲಕ ಅಥವಾ ಕಾನೂನಿನ ಮೇರೆಗೆ, ಆತನ ಮೇಲೆ ವಿಧಿಸಲಾಗಿರುವ ಕರ್ತವ್ಯದ ಯುಕ್ತ ನಿರ್ವಹಣೆಯಲ್ಲಿ, ಆತನು ನೆರವು ನೀಡುತ್ತಾನೆಂಬ ಏಕೈಕ ಕಾರಣಕ್ಕಾಗಿ ಈ ಉಪನಿಯಮದ ಉಪಬಂಧಗಳನ್ನು ಉಲ್ಲಂಘಿಸಿರುವನೆಂದು ಭಾವಿಸತಕ್ಕದ್ದಲ್ಲ ಎಂದು ನಿಯಮ ಹೇಳುತ್ತದೆ.